ಭಕ್ತಸಾಗರದ ನಡುವೆ 'ವಿಜಯ ಚಾತುರ್ಮಾಸ್ಯ' ಸಂಪನ್ನ
ವಿಟ್ಲ: ಬಂಟ್ವಾಳ ತಾಲೂಕು ಮಾಣಿಯ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದಲ್ಲಿ ಗುರುವಾರ ಸಂಪನ್ನಗೊಂಡ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ವಿಜಯ ಚಾತುರ್ಮಾಸ್ಯ ಅಭೂತಪೂರ್ವ ಸಂಖ್ಯೆಯಲ್ಲಿ ಜನಸಮೂಹ ಪಾಲ್ಗೊಳ್ಳುವಿಕೆಯಿಂದ ಗಮನ ಸೆಳೆದಿದೆ.
ಜು.19ರಂದು ಆರಂಭಗೊಂಡು ಸೆ.19ರಂದು ಸ್ವಾಮೀಜಿ ಸೀಮೋಲ್ಲಂಘನೆಯೊಂದಿಗೆ ಕೊನೆಗೊಂಡ ಚಾತುರ್ಮಾಸ್ಯ ಮೂರು ಕಂತಿನ 21 ದಿನಗಳ ರಾಮಕಥಾ ಮಾಲಿಕೆ,
ವಿವಿಧ ವಯೋವಾನದ ಭಕ್ತರಿಗೆ ನಡೆದ ಪ್ರತ್ಯೇಕ ಸಮಾವೇಶಗಳು, ಶಿಸ್ತುಬದ್ಧ ಆತಿಥ್ಯ, 19ರಂದು ನಡೆದ ಹಸ್ತಿದಂತ ಸಿಂಹಾಸನ ಆರೋಹಣ, ಅಡ್ಡಪಲ್ಲಕ್ಕಿ ಉತ್ಸವಗಳೊಂದಿಗೆ ಜನ ಮೆಚ್ಚುಗೆಗೆ ಪಾತ್ರವಾಗಿದೆ.
ಭಕ್ತ ಸಾಗರ: ಸರಾಸರಿ 3,000 ಕ್ಕೂ ಮಿಕ್ಕಿ ಭಕ್ತರು ನಾನಾ ಕಡೆಗಳಿಂದ ಆಗಮಿಸುತ್ತಿದ್ದುದು ಚಾತುರ್ಮಾಸ್ಯದ ಜನಪ್ರಿಯತೆಗೆ ಸಾಕ್ಷಿಯಾಗಿತ್ತು.
ಸ್ವಯಂಸೇವಕರ ದಂಡು: ದಿನಂಪ್ರತಿ 100ಕ್ಕೂ ಮಿಕ್ಕಿ ಸ್ವಯಂಸೇವಕರು ಸ್ವಯಂಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ದಿನಂಪ್ರತಿ ಸೇರುತ್ತಿದ್ದ ಭಕ್ತರಿಗೆ ಮಾರ್ಗದರ್ಶನ, ಅನ್ನಸಂತರ್ಪಣೆ, ವಾಹನ ನಿಲುಗಡೆ, ಕಚೇರಿ ಕಾರ್ಯಗಳು, ಭಕ್ತ ಸಮೂಹ ನಿಯಂತ್ರಣ ಎಲ್ಲವೂ ಸ್ವಯಂಸೇವಕರಿಂದಲೇ ನಡೆಯುತ್ತಿತ್ತು. ಸಾವಿರಾರು ಭಕ್ತರಿಗೆ ಸಮಯಕ್ಕೆ ಸರಿಯಾಗಿ ಶುಚಿ ರುಚಿಯಾದ ಭೋಜನ, ಕಾಫಿ, ಚಹಾ, ತಿಂಡಿಗಳ ವ್ಯವಸ್ಥೆಗಳನ್ನು ರವಿ ಕುಂಟಿನಿ ಬಳಗ ಮಾಡುತ್ತಿತ್ತು.
ರಾಮಕಥಾ: ಮಠದ ನೂತನ 'ಜನಭವನ'ದಲ್ಲಿ ಮೂರು ಕಂತುಗಳಲ್ಲಿ ಒಟ್ಟು 21 ದಿನಗಳ ರಾಮಕಥಾ ಕಾರ್ಯಕ್ರಮವು ಅದ್ಧೂರಿಯಾಗಿ ಮೂಡಿಬಂತು. 'ಹನುಮನೊಡನೆ, ರಾಮನೆಡೆಗೆ' ಕಲ್ಪನೆಯಲ್ಲಿ ಮೂಡಿಬಂದ ರಾಮಕಥೆ ವೀಕ್ಷಣೆಗೆ ರಾಜ್ಯದ ನಾನಾ ಮೂಲೆಗಳಿಂದ ವೀಕ್ಷಿಸಲು ಜನ ಬರುತ್ತಿದ್ದರು. ಶ್ರೀಗಳು ಪ್ರಸ್ತುತಪಡಿಸುವುದು ಕೇವಲ ರಾಮಾಯಣವನ್ನಲ್ಲ. ಅದರ ಜೊತೆ ದಿನಂಪ್ರತಿ ಸಮಾಜಕ್ಕೊಂದು ಸಂದೇಶ ಕೊಡುತ್ತಿದ್ದರು. 21 ದಿನಗಳಲ್ಲಿ 1.15 ಲಕ್ಷ ಮಂದಿ ಸಾಕ್ಷಿಯಾದರು.
ಹಸ್ತಿ ದಂತ ಸಿಂಹಾಸನ: ಚಾತುರ್ಮಾಸ್ಯದ ಅಂತಿಮ ಹಂತದಲ್ಲಿ ಜನರ ಆಕರ್ಷಣೆಗೆ ಕಾರಣವಾದ ಇನ್ನೊಂದು ಅಂಶ ಹಸ್ತಿ ದಂತ ಸಿಂಹಾಸನ.
ದಂತದಿಂದ ತಯಾರಿಸಿದ ಈ ಸಿಂಹಾಸನಕ್ಕೆ ಅತ್ಯಮೂಲ್ಯವಾದ ವಜ್ರ-ವೈಢೂರ್ಯ, ಅಪರೂಪದ ಮುತ್ತು, ರತ್ನ, ಹರಳು ಪೋಣಿಸಲಾಗಿದೆ. ಸಂಪೂರ್ಣ ರಾಮಾಯಣ, ಮಹಾಭಾರತದ ಹಾಗೂ ಭಾಗವತದ ಪ್ರಮುಖ ಘಟನಾವಳಿಗಳನ್ನು ಸುಂದರವಾಗಿ ದಂತದಲ್ಲಿ ಕೆತ್ತಲಾಗಿದೆ.
ಪ್ರಪಂಚದ ಬೇರಾವ ಜಾಗದಲ್ಲಿಯೂ ಇಂತಹ ಮತ್ತೊಂದು ಸಿಂಹಾಸನ ಕಾಣಸಿಗಲಿಕ್ಕಿಲ್ಲ. ಬೆಲೆ ಕಟ್ಟಲಾಗದ ಈ ಅಪರೂಪದ ಸಿಂಹಾಸನವಿರುವುದು ಇತಿಹಾಸ ಪ್ರಸಿದ್ಧ ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ.
ಮುಡಗೋಡಿನ ಗುಡಿಗಾರರಾಗಿದ್ದ ಹಿರಿಯಣ್ಣಪ್ಪ ಹಾಗೂ ಅವರ 15 ಕಲಾಕಾರರ ತಂಡ 18 ವರ್ಷಗಳ ಸತತ ಪರಿಶ್ರಮದಿಂದ ಈ ಪ್ರಖ್ಯಾತ ಸಿಂಹಾಸನ ರೂಪಿಸಿದರು. ಮಹಾತ್ಮಾ ಗಾಂಧೀಜಿ ಈ ಸಿಂಹಾಸನವನ್ನು ವೀಕ್ಷಿಸಿ ಅದರಲ್ಲಿಯ ಕಲಾ ಪ್ರತಿಭೆ,ಮೋಹಕತೆಗೆ ಮಾರುಹೋಗಿದ್ದರೆಂದು ದಾಖಲೆ ತಿಳಿಸುತ್ತದೆ.
ಇಂತಹ ಸಿಂಹಾಸನದಲ್ಲಿ ಶ್ರೀ ರಾಘವೇಶ್ವರ ಶ್ರೀಗಳು ಗುರುವಾರ ವಿರಾಜಮಾನರಾಗಿದ್ದು, ಮಾತ್ರವಲ್ಲದೆ, ಅಡ್ಡಪಲ್ಲಕಿ ಉತ್ಸವವೂ ನಡೆದು ಸಹಸ್ರಾರು ಭಕ್ತರು ಇದಕ್ಕೆ ಸಾಕ್ಷಿಗಳಾದರು.