ಹಕ್ಕುಪತ್ರ ದೊರಕಿದ್ದರೂ, ಮನೆ ಕಟ್ಟುವ ಭಾಗ್ಯವಿಲ್ಲ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮೇಯರ್ ಚುನಾವಣೆ ನಡೆಯದೇ ಇರುವುದರ ಪರಿಣಾಮ, 2013-14ನೇ ವಾಜಪೇಯಿ ವಸತಿ ನಿವೇಶನ ಯೋಜನೆಯಡಿ ಫಲಾನುಭವಿಗಳಿಗೆ ಹಕ್ಕು ಪತ್ರ ದೊರಕಿದ್ದರೂ, ಮನೆ ಕಟ್ಟುವ ಭಾಗ್ಯ ಇನ್ನೂ ಲಭಿಸಿಲ್ಲ.
ಸ್ವಂತ ಮನೆ ತಮ್ಮದಾಯಿತು ಎಂಬ ಖುಷಿಯಲ್ಲಿದ್ದ ಬಡವರಿಗೆ ಇಂದು ಮನೆ ಎಂಬುದು ಕನ್ನಡಿಯೊಳಗಿನ ಗಂಟಿನಂತಾಗಿದೆ.
2013ನೇ ವಿಧಾನಸಭೆ ಚುನಾವಣೆ ಮೊದಲು ಮಂಗಳೂರು ಉತ್ತರ ವಲಯ ಶಾಸಕ ಕೃಷ್ಣ ಪಾಲೆಮಾರ್ ಅವರು ಸುರತ್ಕಲ್‌ನ ಕಾಟಿಪಳ್ಳ ಪ್ರದೇಶದ ಜನತಾ ಕಾಲೋನಿಯಲ್ಲಿ ವಾಜಪೇಯಿ ನಿವೇಶನ ಯೋಜನೆಯಡಿ ಸುಮಾರು 85 ಮಂದಿಗೆ ಹಕ್ಕು ಪತ್ರ ನೀಡಿರುತ್ತಾರೆ. ಆದರೆ ಮನೆ ಕಟ್ಟಲು ಸರ್ಕಾರಕ್ಕೆ ಫಲಾನುಭವಿಗಳ ಪಟ್ಟಿ ಕಳುಹಿಸಿದ್ದರೂ, ಇನ್ನೂ ಯೋಜನೆ ಹಣ ಬಿಡುಗಡೆಯಾಗದೆ ಫಲಾನುಭವಿಗಳು ಮನೆ ಕಟ್ಟಲು ಪರದಾಡುತ್ತಿದ್ದಾರೆ.
ಫಲಾನುಭವಿಗಳು ಸ್ವಂತ ಖರ್ಚಿನಲ್ಲಿ ಮನೆ ನಿರ್ಮಾಣಗೊಳಿಸಲು ಪ್ರಯತ್ನಪಟ್ಟರೆಸರ್ಕಾರ ಗುರುತಿಸಿಕೊಟ್ಟ ಜಾಗದಲ್ಲಿ ನೀರಿನ ಸೌಕರ್ಯ ಇಲ್ಲವಾಗಿದೆ.
15 ವರ್ಷಗಳ ಹಿಂದೆ ಪಾಲಿಕೆ ವತಿಯಿಂದ ಸುರತ್ಕಲ್‌ನ ಕಾನ, ಪಚ್ಚನಾಡಿಯ ಕುರ್ಸುಗುಡ್ಡೆ, ಸರಿಪಳ್ಳದಲ್ಲಿ ಬಡವರಿಗೆ ಹಕ್ಕು ಪತ್ರ ನೀಡಿ, ಮನೆ ಒದಗಿಸಲಾಗಿದೆ. 2013-14ನೇ ಸಾಲಿನ ವಾಜಪೇಯಿ ವಸತಿ ನಿವೇಶನ, ಇಂದಿರಾ ಅವಾಸ್, ಬಸವ ಜಯಂತಿ ಯೋಜನೆಯಲ್ಲಿ ಸರ್ಕಾರ ಹೊಸ ನಿಯಾಮವಳಿ ರೂಪಿಸಿದೆ. ಇದರ ಪ್ರಕಾರ ಫಲಾನುಭವಿಗಳ ಪಟ್ಟಿಯನ್ನು ಆನ್‌ಲೈನ್ ಮೂಲಕ ಕಳುಹಿಸಿ, ಸರ್ಕಾರದ ಅನುಮತಿ ಪಡೆಯಲಾಗುತ್ತದೆ. ನಂತರ ಖಾಲಿಯಿರುವ ನಿವೇಶನವನ್ನು ಜಿಪಿಎಸ್ ಮೂಲಕ ನಿಗಮಕ್ಕೆ ಕಳುಹಿಸಲಾಗುತ್ತದೆ. ಮನೆಯ ಪ್ರತಿಯೊಂದು ಕಾಮಗಾರಿಯನ್ನು ಜಿಪಿಎಸ್ ಮೂಲಕ ನಿಗಮಕ್ಕೆ ಮಾಹಿತಿ ನೀಡಲಾಗುತ್ತದೆ. ನಂತರ ಯೋಜನೆಯ ರು. 1.20 ಲಕ್ಷ ಮೊತ್ತ ನಾಲ್ಕು ಕಂತಾಗಿ ಹಂತ ಹಂತವಾಗಿ ಫಲಾನುಭವಿಗಳಿಗೆ ದೊರಕುತ್ತದೆ. ಈ ಮೊತ್ತ ಸರ್ಕಾರ ರೂಪಿಸಿದ ಬ್ಯಾಂಕ್ ಅಕೌಂಟ್‌ಗೆ ಸಂದಾಯವಾಗುತ್ತದೆ.
ಇಂದಿರಾ ಆವಾಸ್ ಯೋಜನೆ: ಇದರಲ್ಲಿ ಒಟ್ಟು 679 ಮನೆ ನಿರ್ಮಾಣಕ್ಕೆ ನಿಗಮ ಪ್ರಸ್ತಾವನೆ ಸಲ್ಲಿಸಿದ್ದು, ಒಟ್ಟು 200 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ.
ಪಂಚಾಯ್ತಿ ವ್ಯಾಪ್ತಿಯಲ್ಲಿನ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಯೋಜನೆಯನ್ನು ಒದಗಿಸುವುದು ಪಿಡಿಓಗಳ ಜವಾಬ್ದಾರಿ. ಇವರು ಪಂಚಾಯ್ತಿನಲ್ಲಿ ಗ್ರಾಮಸಭೆ ಮೂಲಕ ಪಂಚಾಯ್ತಿ ಸದಸ್ಯರಿಗೆ ಮತ್ತು ಜನರಿಗೆ ಮಾಹಿತಿ ತಿಳಿಸಬೇಕಾಗುತ್ತದೆ. ಸದಸ್ಯರು ತಮ್ಮ ವ್ಯಾಪ್ತಿಯ ಅರ್ಹರಿಗೆ ಈ ಯೋಜನೆಯನ್ನು ತಿಳಿಸಿ ಗುರುತಿಸಬೇಕಾಗುತ್ತದೆ.
49 ಪಂಚಾಯ್ತಿನಿಂದ 1,659 ಮನೆ
ನಿರ್ಮಾಣ ಗುರಿ: ಫಲಾನುಭವಿಗಳು 845
ರಾಜೀವ್ ಗಾಂಧಿ ಅವಾಸ್ ನಿಗಮದಡಿಯಲ್ಲಿ ಪಂಚಾಯ್ತಿ ವ್ಯಾಪ್ತಿಗೆ ಇಂದಿರಾ ಆವಾಸ್ ಮತ್ತು ಬಸವ ವಸತಿ ಯೋಜನೆಯಡಿ ಸ್ವಂತ ಜಾಗ ಹೊಂದಿದರವರು ಮನೆ ನಿರ್ಮಾಣಕ್ಕೆ 1.20 ಲಕ್ಷ ಸಬ್ಸಿಡಿ ಪಡೆಯಬಹುದು.
ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 49 ಗ್ರಾಮ ಪಂಚಾಯ್ತಿಗಳಿದ್ದು, ನಿಗಮ ಒಟ್ಟು 1,659 ಮನೆ ನಿರ್ಮಾಣದ ಗುರಿ ನೀಡಿದೆ. ಇದರ ಸಂಪೂರ್ಣ ಜವಾಬ್ದಾರಿ ಪಿಡಿಒಗಳಿಗೆ ವಹಿಸಲಾಗಿದೆ.
ಬಸವ ವಸತಿ ಯೋಜನೆ: ಬಸವ ವಸತಿ ಯೋಜನೆಯಡಿ ಒಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 20 ಮನೆಯಂತೆ ಒಟ್ಟು 980 ಮನೆ ನಿರ್ಮಾಣಗೊಳ್ಳಬೇಕಿದೆ. ಒಟ್ಟು 595 ಫಲಾನುಭವಿಗಳ ಪಟ್ಟಿ ಬಂದಿದ್ದು, ಮನೆ ನಿರ್ಮಾಣಕ್ಕೆ ರು. 1.20 ಸಹಾಯಧನ ನೀಡಲಾಗುತ್ತದೆ.
- ವಜ್ರಾಕ್ಷಿ ಬಂಟ್ವಾಳ