9 ರಾ.ಹೆದ್ದಾರಿ ಅಭಿವೃದ್ಧಿಗೆ ಹಸಿರು ನಿಶಾನೆ
ಮಂಗಳೂರು: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯದ 9 ಪ್ರಮುಖ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಅರಣ್ಯ ಮತ್ತು ಪರಿಸರ ಇಲಾಖೆ ಹಸಿರು ನಿಶಾನೆ ನೀಡಿದ್ದು, ಇದರಿಂದ ಅಂತಾರಾಜ್ಯ ರಾಷ್ಟ್ರೀಯ ಹೆದ್ದಾರಿಗಳ ಅಗಲ ಮತ್ತು ಅಭಿವೃದ್ಧಿ ಕಾಮಗಾರಿಗೆ ಚಾಲನೆ ಸಿಕ್ಕಿದಂತಾಗಿದೆ.
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವ ರಮಾನಾಥ ರೈ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಅಂಕೋಲ-ಹುಬ್ಬಳ್ಳಿ ಹೆದ್ದಾರಿ ಸದ್ಯ 12 ಮೀಟರ್ ಮಾತ್ರ ಅಗಲ ಮಾಡಲು ಅವಕಾಶ ನೀಡಲಾಗಿದ್ದು, 193.5 ಹೆಕ್ಟೇರ್ ಅರಣ್ಯ ಪ್ರದೇಶದ ವರ್ಗಾವಣೆಗೆ ತಾತ್ವಿಕ ಒಪ್ಪಿಗೆ ನೀಡಿದ ನಂತರ ಮುಂದಿನ ಹೆಜ್ಜೆಗೆ ನಿರ್ಧರಿಸಲಾಗಿದೆ.
ಬಂಟ್ವಾಳ-ಹಾಸನ, ಕುಂದಾಪುರ-ಗೋವಾ ರಾಜ್ಯ ಗಡಿ, ಬೆಳಗಾವಿ-ಗೌಹಾತಿ, ಹೊಸಪೇಟೆ-ಬಳ್ಳಾರಿ-ಆಂಧ್ರ ಗಡಿ, ಹೊಸಪೇಟೆ-ದಾಬಸ್ಪೇಟೆ, ರಾ.ಹೆ.9 ಸಂಗರೆಡ್ಡಿ ರೆಕ್ಷನ್ ಮಹಾರಾಷ್ಟ್ರ ಗಡಿತನಕ, ಹೊಸಪೇಟೆ-ಚಿತ್ರದುರ್ಗ, ಬಿಜಾಪುರ-ಗುಲ್ಬರ್ಗ-ಹೊಮ್ನಾಬಾದ್ ಮತ್ತು ತಮಿಳ್ನಾಡು ಗಡಿತನಕ ಡಿಂಡಿಗಲ್ ಸೆಕ್ಷನ್ ರಾ.ಹೆ.209 ಈ 9 ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಅನುಮತಿ ನೀಡುವ ಬಗ್ಗೆ ಕಾಲಮಿತಿಯಲ್ಲಿ ಇತ್ಯರ್ಥಪಡಿಸಲು ನಿರ್ಧರಿಸಲಾಗಿದೆ.
ಹಾ.ಹೆ.75 ಹಾಸನ-ಬಂಟ್ವಾಳಕ್ಕೆ ಸಂಬಂಧಿಸಿ ಬಾಕಿ ಉಳಿದಿರುವ ಕಡತವನ್ನು 15 ದಿನದಲ್ಲಿ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸಚಿವ ರಮಾನಾಥ ರೈ, ಅರಣ್ಯ, ಪರಿಸರ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಅವಧಿಯೊಳಗೆ ಇತ್ಯರ್ಥಪಡಿಸುವ ಭರವಸೆ ನೀಡಿದರು.
ರಾಜ್ಯದಲ್ಲಿ ಪ್ರಸ್ತಾವಿತ ಇತರ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗಳಿಗೆ ಬಾಕಿ ಇಳಿದ ಪ್ರಸ್ತಾವಗಳನ್ನು ಕೂಡಲೇ ವಿಲೇವಾರಿ ಮಾಡಲು ಸೂಚನೆ ನೀಡಿದರು. ಪರಿಸರ, ವನ್ಯಜೀವಿ ಸಂರಕ್ಷಣೆ ಗಮನದಲ್ಲಿರಿಸಿ ಸಂಪರ್ಕ ಹೆದ್ದಾರಿಗಳ ಅಭಿವೃದ್ಧಿಗೆ ತೊಡಕುಗಳನ್ನು ನಿವಾರಿಸಿ ಪ್ರಗತಿಗೆ ಸ್ಪಂದಿಸುವಲ್ಲಿ ವಿಳಂಬವಾಗಬಾರದು ಎಂದರು.