ಕರಾವಳಿ ಜಿಲ್ಲೆಯಲ್ಲಿ ಕಲಾವಿದರಿಗೆ ಪ್ರೋತ್ಸಾಹ: ಶಿವಾನಂದ ಹೆಗಡೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಲಾವಿದರಿಗೆ ಬಹುದೊಡ್ಡ ಪ್ರೋತ್ಸಾಹವಿದ್ದು, ಯಾವುದೇ ಭೇದಭಾವವಿಲ್ಲದೆ ಕಲೆಯನ್ನು ಆಸ್ವಾದಿಸುವ ಗುಣವಿದೆ ಎಂದು ಕೆರೆಮನೆ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ನಿರ್ದೇಶಕ ಶಿವಾನಂದ ಹೆಗಡೆ ಹೇಳಿದರು.
ಮಂಗಳೂರು ಪುರಭವನದಲ್ಲಿ ಶನಿವಾರ ಕೆರೆಮನೆ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ವತಿಯಿಂದ ನಡೆದ 'ಶ್ರೀಮಯ ಯಕ್ಷತ್ರಿವೇಣಿ ಸನ್ಮಾನ' ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ಯಕ್ಷಗಾನ ಕಲೆಯ ಮಹತ್ವ ವಿದ್ಯಾರ್ಥಿಗಳನ್ನು ತಲುಪುವ ಅನಿವಾರ್ಯತೆ ಇದೆ. 1934ರಲ್ಲಿ ಪ್ರಾರಂಭವಾದ ಮಂಡಳಿ 80 ವರ್ಷಗಳಲ್ಲಿ ಯಕ್ಷಗಾನ ಕಲಾಸೇವೆಯನ್ನು ನೀಡುತ್ತಾ ಬಂದಿದೆ. ಕಲಾವಿದರನ್ನು ಉಳಿಸುವ ಮತ್ತು ಕಲೆಯನ್ನು ಬೆಳೆಸುವುದೇ ಮಂಡಳಿಯ ಉದ್ದೇಶ ಎಂದರು. ಯಕ್ಷಗಾನ ಸಮಾಜದ ಸಮಗ್ರತೆಯನ್ನು ಒಳಗೊಂಡಿದೆ. ಕಲಾವಿದರನ್ನು ಗುರುತಿಸುವ ಜತೆಗೆ, ಪ್ರೋತ್ಸಾಹಿಸುವ ಅಭಿಮಾನಿಗಳನ್ನು ಅಭಿನಂದಿಸುವುದು ಮುಖ್ಯ ಎಂದರು.
ಶ್ರೀಮಯ ಯಕ್ಷತ್ರಿವೇಣಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷ ಎಂ.ಬಿ. ಪುರಾಣಿಕ್, ಶಿಕ್ಷಣದಲ್ಲಿ ಮೌಲ್ಯಗಳನ್ನು ಉಪೇಕ್ಷಿಸುವ ನೀತಿ ಬಂದಿದ್ದು ನೋವು ತಂದಿದೆ. ಕೇವಲ ಅಂಕ ಗಳಿಸುವುದೊಂದೇ ಶಿಕ್ಷಣದ ಗುರಿಯಾಗದೇ ಸಂಸ್ಕಾರಯುತ ಮೌಲ್ಯ, ಕಲೆಯನ್ನು ಪ್ರೀತಿಸುವ ಅರಿವು ಮಕ್ಕಳಿಗೆ ನೀಡಬೇಕಾಗಿದೆ. ಕಲೆಯನ್ನು ಬೆಳೆಸುವಲ್ಲಿ ಉಳಿಸುವಲ್ಲಿ ಕೆರೆಮನೆ ಕುಟುಂಬ ಮಾಡುತ್ತಿರುವ ನಿಸ್ವಾರ್ಥ ಸೇವೆ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳು ಶಿಕ್ಷಣಕ್ಕೆ ಪೂರಕವಾಗಲಿದೆ. ಟಿ.ವಿ. ಮಾಧ್ಯಮದಿಂದ ಯಕ್ಷಗಾನ ಕಲೆಗೆ ತೊಂದರೆಯಾಗುತ್ತದೆ ಎಂಬ ಭಯವಿತ್ತು. ಆದರೆ ದೊಡ್ಡ ಪ್ರಮಾಣದ ಪ್ರೋತ್ಸಾಹ ಸಿಗುತ್ತಿರುವುದನ್ನು ಗಮನಿಸಿದಾಗ ಯಕ್ಷಗಾನಕ್ಕೆ ಇನ್ನೂ ಭವಿಷ್ಯವಿದೆ ಎಂಬ ವಿಶ್ವಾಸ ಬಂದಿದೆ ಎಂದರು.
ಈ ಸಂದರ್ಭ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ವತಿಯಿಂದ 'ವಾಲಿ ಮೋಕ್ಷ' ಯಕ್ಷಗಾನ ಪ್ರದರ್ಶನ ನಡೆಯಿತು. ಭಾಗವತರಾಗಿ ಅನಂತ ಹೆಗಡೆ ದಂತಳಿಕೆ ಸಹಕರಿಸಿದರು.
ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಆದಿತ್ಯ ಭಟ್, ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಕುಂಬ್ಳೆ ಸುಂದರ ರಾವ್, ಯಕ್ಷಗಾನ ಕಲಾವಿದ ರವಿ ಅಲೆವೂರಾಯ, ಕೆರೆಮನೆ ನಿರಂಜನ ಹೆಗಡೆ, ಕೆರೆಮನೆ ನರಸಿಂಹ ಹೆಗಡೆ, ಸಾಂಸ್ಕೃತಿಕ ಸಂಘಟಕ ಸುಧಾಕರ ರಾವ್ ಪೇಜಾವರ ಇದ್ದರು.