ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ದಾಳಿ ಎದುರಿಸಿ ಕ್ರೈಸ್ತ ಸಮಾಜ ಸಂಘಟನೆ: ಮಾರ್ಗರೆಟ್ ಆಳ್ವ

Mainashree
Updated On : 23 Sept 2013, 10:48 am

ಮಂಗಳೂರು:  ಅನೇಕ ವರ್ಷಗಳಿಂದ ಕೈಸ್ತ ಸಮಾಜದ ಮೇಲೆ ನಡೆಯುತ್ತಿದ್ದ ವಿವಿಧ ದಾಳಿ ಎದುರಿಸಿ ಕ್ರೈಸ್ತ ಸಂಘಟನೆ ಬೆಳೆದುಬಂದಿದೆ ಎಂದು ರಾಜಸ್ತಾನ ರಾಜ್ಯಪಾಲೆ ಮಾರ್ಗರೆಟ್ ಆಳ್ವ ಹೇಳಿದ್ದಾರೆ.
ನಗರದ ಮಿಲಾಗ್ರಿಸ್ ಸಭಾಂಗಣದಲ್ಲಿ ಭಾನುವಾರ ದ.ಕ.ಕೆಥೋಲಿಕ್ ಎಸೋಸಿಯೇಶನ್‌ನ(ಕಾಸ್ಕ್)ನೂರನೇ ವರ್ಷಾಚರಣೆ ಸಂಭ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೈಸ್ತ ಸಮುದಾಯ ಅನೇಕ ಸಮಸ್ಯೆಗಳನ್ನು ಎದುರಿಸಿಯೂ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದು, ಸಾವಿರಾರು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಜಾತ್ಯತೀಯ ಹಾಗೂ ನಾಯಕತ್ವ ಗುಣ ಬೆಳೆಸಿದೆ. ಇಂಥ ಸಾಧನೆ ಮಧ್ಯೆ ಈ ಸಂಘಟನೆ ಶತಮಾನ ಪೂರೈಸಿರುವುದು ಶ್ಲಾಘನೀಯ ಎಂದರು.
ಸಾಂಸ್ಕೃತಿಕವಾಗಿ ಸಂಪದ್ಭರಿತವಾದ ಕೊಂಕಣಿ ಭಾಷೆಯ ಹಿರಿಮೆಯನ್ನು ಕೊಂಡಾಡಿದ ಮಾರ್ಗರೆಟ್, ಕೊಂಕಣಿ ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವಲ್ಲಿ ಕೊಂಕಣಿ ಸಂಘಟನೆಗಳ ಪರಿಶ್ರಮವನ್ನು ನೆನಪಿಸಿದರು.
ಸ್ಮರಣ ಸಂಚಿಕೆ ಬಿಡುಗಡೆ: ಇದೇ ಸಂದರ್ಭ, 'ಕಾಸ್ಕ್ ಶತಮಾನ ಚರಿತ್ರೆ ಮತ್ತು ಮಂಗಳೂರಿನ ಕೆಥೋಲಿಕ್ ಸಮುದಾಯ' ಕುರಿತ ಸ್ಮರಣ ಸಂಚಿಕೆಯನ್ನು ಮಾರ್ಗರೆಟ್ ಆಳ್ವ ಬಿಡುಗಡೆಗೊಳಿಸಿದರು.
ವೆಬ್‌ಸೈಟ್‌ಗೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ಆಸ್ಕರ್ ಫೆರ್ನಾಂಡಿಸ್, ಮಾರ್ಗರೆಟ್ ಆಳ್ವರ ಹಿರಿಯರಾದ ಜೋಕಿಂ ಆಳ್ವ ಮತ್ತು ವೈಲೆಟ್ ಆಳ್ವರ ಸೇವೆಯನ್ನು ಸ್ಮರಿಸಿ, ಕ್ರೈಸ್ತ ಜನತೆ ದೇಶಕ್ಕೆ ಸೇವೆ ನೀಡುವಲ್ಲಿ ಹಿಂದೆ ಬಿದ್ದಿಲ್ಲ. ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ತ ಸಮುದಾಯ ಗಮನಾರ್ಹ ಕೊಡುಗೆ ನೀಡಿದೆ ಎಂದರು.
25 ಮಂದಿ ಶಾಲಾ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ವಿತರಿಸಿ ಮಾತನಾಡಿದ ಮಂಗಳೂರು ದಕ್ಷಿಣ ಶಾಸಕ ಜೆ.ಆರ್.ಲೋಬೋ, ನೂರು ವರ್ಷ ತುಂಬಿದ ಈ ಸಂಘಟನೆ ಮುಂದೆ ಹೇಗೆ ಮುಂದಡಿ ಇಡಬೇಕು ಎಂಬುದನ್ನು ಚಿಂತಿಸಬೇಕಾಗಿದೆ. ಒಗ್ಗಟ್ಟಾಗಿ ಕೆಲಸ ಮಾಡುವುದರಿಂದ ಸಮಾಜದ ಜತೆ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಪುಣೆ ರೋಸರಿ ಎಜುಕೇಶನ್ ಗ್ರೂಪ್ ಅಧ್ಯಕ್ಷ ವಿವೇಕ್ ಅರ್ಹಾನಾ ಆಗಮಿಸಿದ್ದರು. ಮಂಗಳೂರು ಬಿಷಪ್ ಡಾ.ಅಲೋಶಿಯಸ್ ಪೌಲ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು.
ಕಾಸ್ಕ್ ಅಧ್ಯಕ್ಷ ಡಾ.ಡೆರಿಕ್ ಲೋಬೋ ಸ್ವಾಗತಿಸಿ, ಕಾರ್ಯದರ್ಶಿ ಕ್ಯಾ.ಜೋನ್ ಮಿನೇಜಸ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement