ಪುತ್ತೂರಿನ ಸನಿಹ ಕುಪ್ಪೆಟ್ಟಿಗೆ ರಾಷ್ಟ್ರಪತಿ ಪುರಸ್ಕಾರ
ಪುತ್ತೂರು: ದೆಹಲಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಸಂಸ್ಥೆ ಹರಿಯಾಣ ರಾಜ್ಯದ ಪಲ್ವಾಲ್ ಜಿಲ್ಲೆಯ ಎನ್‌ವೈಸಿ ಗಡ್ಪುರಿಯಲ್ಲಿ ಏರ್ಪಸಿದ 5 ದಿನಗಳ ಗೆಟ್-ಟುಗೆದರ್ ಕ್ಯಾಂಪ್‌ಗೆ ಕರ್ನಾಟಕ ಪ್ರತಿನಿಧಿಯಾಗಿ ಭಾಗವಹಿಸಿದ್ದ ಪುತ್ತೂರು ಮೂಲದ ಸನಿಹ ಕುಪ್ಪೆಟ್ಟಿ ಅವರಿಗೆ ರಾಷ್ಟ್ರಪತಿ ಪುರಸ್ಕಾರ ಲಭಿಸಿದೆ.
ಕ್ಯಾಂಪ್ ನಡೆದ ಬಳಿಕ ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಗೈಡ್ಸ್‌ನ ಅತ್ಯುನ್ನತ ಪುರಸ್ಕಾರವಾದ ರಾಷ್ಟ್ರಪತಿ ಪುರಸ್ಕಾರವನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಸನಿಹಾ ಕುಪ್ಪೆಟ್ಟಿಗೆ ನೀಡಿ ಗೌರವಿಸಿದರು.
ಪ್ರಸ್ತುತ ತುಮಕೂರಿನ ಸಿದ್ದಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಥಮ ವರ್ಷದ ಆರ್ಕಿಟೆಕ್ಚರ್ ಎಂಜಿನಿಯರ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಸನಿಹ ಕುಪ್ಪೆಟ್ಟಿ ಪುತ್ತೂರಿನ ರಾಜೇಂದ್ರ ಕುಪ್ಪೆಟ್ಟಿ-ರೇಖಾ ದಂಪತಿ ಪುತ್ರಿ. ಪುತ್ತೂರಿನ ರಾಮಕೃಷ್ಣ ಪ್ರೌಢಶಾಲೆಯ ಗೈಡ್ ಶಿಕ್ಷಕಿ ಸುನೀತಾ ಮಾರ್ಗದರ್ಶನದಲ್ಲಿ ಇವರು ಈ ಪುರಸ್ಕಾರ ಪಡೆದಿದ್ದಾರೆ.