ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪೊಲೀಸ್ ಸರ್ಕಲ್

Mainashree
Updated On : 23 Sept 2013, 10:47 am

ಊಟಿಯ ವ್ಯಕ್ತಿ ಮಲ್ಪೆಯಲ್ಲಿ ಸಮುದ್ರ ಪಾಲು
ಮಲ್ಪೆ: ವ್ಯಕ್ತಿಯೊಬ್ಬರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಮಲ್ಪೆ ಸಮುದ್ರ ಕಿನಾರೆಯಲ್ಲಿ ಭಾನುವಾರ ಸಂಜೆ ನಡೆದಿದೆ. ಮೃತರನ್ನು ಊಟಿ ಮೂಲದ ಕುಮಾರ್ (45) ಎಂದು ಗುರುತಿಸಲಾಗಿದೆ. ಇವರು 20 ಮಂದಿಯ ತಂಡದಲ್ಲಿ ಉಡುಪಿಗೆ ಪ್ರವಾಸಕ್ಕೆ ಬಂದಿದ್ದು, ಸಂಜೆ ಸಮುದ್ರ ಕಿನಾರೆಯಲ್ಲಿ ಆಟವಾಡುತ್ತಿದ್ದ ವೇಳೆ ಮೂರ್ಛೆ ರೋಗದಿಂದ ಬಳಲಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೂರ್ವದ್ವೇಷ: ವ್ಯಕ್ತಿ ಮೇಲೆ ಹಲ್ಲೆ
ವಿಟ್ಲ: ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬ ವ್ಯಕ್ತಿಯೊಬ್ಬರಿಗೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ ಘಟನೆ ವಿಟ್ಲಪಡ್ನೂರು ಗ್ರಾಮದ ಕಾಪುಮಜಲು ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ. ವಿಟ್ಲಪಡ್ನೂರು ಗ್ರಾಮದ ಎರ್ಮನಿಲೆ ನಿವಾಸಿ ರಾಮಯ್ಯ ರೈ ಎಂಬವರ ಪುತ್ರ ಪ್ರಕಾಶ್ ರೈ (51) ಹಲ್ಲೆಗೊಳಗಾದವರು. ಇವರು ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಮನೆ ಕಡೆ ತೆರಳುತ್ತಿದ್ದ ಸಂದರ್ಭ ವಿಟ್ಲಪಡ್ನೂರು ಗ್ರಾಮದ ರಾಧುಕಟ್ಟೆ ನಿವಾಸಿ ಆರೋಪಿ ಹರೀಶ್ ಕೊಟ್ಟಾರಿ ಎಂಬಾತ ಅವರನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ವಿಕೆಟ್‌ನಿಂದ ಹಲ್ಲೆ ನಡೆಸಿರುವುದಾಗಿ ಗಾಯಾಳು ಪೊಲೀಸರಿಗೆ ದೂರು ನೀಡಿದ್ದಾರೆ. ಗಾಯಾಳು ವಿಟ್ಲದ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಲ್ಲೇ ಜುಗಾರಿ; 6 ಮಂದಿ ಸೆರೆ
ಉಪ್ಪಿನಂಗಡಿ: ಇಲ್ಲಿನ ಪೆರಾಬೆ ಗ್ರಾಮದ ಸುರುಳಿ ಎಂಬಲ್ಲಿನ ಮನೆಯೊಂದರಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಕಡಬ ಪೊಲೀಸರು ದಾಳಿ ಮಾಡಿ ಜುಗಾರಿ ನಿರತ 6 ಮಂದಿಯನ್ನು ಬಂಧಿಸಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಪೆರಾಬೆ ಗ್ರಾಮದ ಮನೆಯೊಂದರಲ್ಲಿ ಜುಗಾರಿ ಆಟ ನಡೆಯುತ್ತಿದೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದ ಕಡಬ ಠಾಣೆಯ ಪ್ರಭಾರ ಠಾಣಾಧಿಕಾರಿ ಸಜೀತ್ ಕುಮಾರ್, ಪಿಎಸ್‌ಐ ಯೋಗೀಶ್ ಹಾಗೂ ಸಿಬ್ಬಂದಿ ದಾಳಿ ನಡೆಸಿ, ರು. 3,340 ನಗದು ಹಾಗೂ 1 ಜೀಪ್, 1 ಮಾರುತಿ ಕಾರು, 1 ಓಮ್ನಿ ಹಾಗೂ 4 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜುಗಾರಿ: ವ್ಯಕ್ತಿ ಸೆರೆ
ಹಿರಿಯಡ್ಕ: ಇಲ್ಲಿನ ಬೊಮ್ಮರಬೆಟ್ಟು ಗ್ರಾಮದ ಪುತ್ತಿಗೆ ಸಾರ್ವಜನಿಕ ಬಸ್ ನಿಲ್ದಾಣ ಬಳಿ ಜುಗಾರಿ ಆಡುತ್ತಿದ್ದ ವ್ಯಕ್ತಿಯೊಬ್ಬನನ್ನು ಹಿರಿಯಡ್ಕ ಪೊಲೀಸರು ಭಾನುವಾರ ದಸ್ತಗಿರಿ ಮಾಡಿದ್ದಾರೆ. ಆಟಕ್ಕೆ ಬಳಸಿದ 690 ನಗದು ಹಾಗೂ ಇತರೆ ಪರಿಕರ ವಶಪಡಿಸಿಕೊಳ್ಳಲಾಗಿದೆ.
ಬೈಕ್ ಡಿಕ್ಕಿ; ಸೈಕಲ್ ಸವಾರ ಗಾಯ
ಉಡುಪಿ: ಬೈಕ್- ಸೈಕಲ್ ಡಿಕ್ಕಿಯಾಗಿ ಸೈಕಲ್ ಸವಾರ ಗಾಯಗೊಂಡ ಘಟನೆ ಶಿರ್ವ ಬಸ್ ನಿಲ್ದಾಣ ಬಳಿ ಶನಿವಾರ ನಡೆದಿದೆ.ವಾದಿರಾಜ ಅಚಾರ್ಯ ಎಂಬವರು ತನ್ನ ಸೈಕಲ್‌ನಲ್ಲಿ ಶಿರ್ವ ಬಸ್ ನಿಲ್ದಾಣ ಬಳಿಯ ಅಂಗಡಿ ಎದುರು ರಸ್ತೆ ದಾಟುತ್ತಿದ್ದಾಗ ಸೈಂಟ್ ಮೇರಿಸ್ ವೃತ್ತ ಕಡೆಯಿಂದ ಬಂದ ಬೈಕ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಮುಖಾಮುಖಿ: ಚಾಲಕರಿಗೆ ಗಾಯ
ಮೂಲ್ಕಿ: ಇಲ್ಲಿನ ಕಾರ್ನಾಡ್ ಬೈಪಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಲಾರಿಗಳೆರಡು ಭಾನುವಾರ ರಾತ್ರಿ ಮುಖಾಮುಖಿ ಡಿಕ್ಕಿಯಾಗಿ, ಚಾಲಕರಿಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಲಾರಿ ಓವರ್‌ಟೇಕ್ ಮಾಡುವ ಭರದಲ್ಲಿ ಉಡುಪಿ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಲಾರಿಗೆ ಮುಖಾಮುಖಿ ಡಿಕ್ಕಿ ಹೊಡೆಯಿತು. ಇದರಿಂದ ಲಾರಿಗಳು ನುಜ್ಜುಗುಜ್ಜಾಗಿದ್ದು, ಸಣ್ಣಪುಟ್ಟ ಗಾಯಗಳಿಂದ ಚಾಲಕರು ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಸುಮಾರು ಅರ್ಧ ಗಂಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಮೂಲ್ಕಿ ಪೊಲೀಸರು ಸ್ಥಳಕ್ಕೆ ಧಾವಿಸಿ ಲಾರಿಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.
ಕಚೇರಿಗೆ ನುಗ್ಗಿ ಹಲ್ಲೆ: 3 ಸೆರೆ
ಮಂಗಳೂರು: ಕೂಳೂರು ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಕಚೇರಿಗೆ ನುಗ್ಗಿ ಉದ್ಯೋಗಿ ಮೇಲೆ ಹಲ್ಲೆ ನಡೆಸಿದ ಮೂವರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಪಂಜಿಮೊಗರು, ವಿದ್ಯಾರಣ್ಯ ನಿವಾಸಿಗಳು ರಾಜೇಶ್ ಹರೀಶ್, ದೀಪಕ್ ಬಂಧಿತರು. ಇನ್ನೊಬ್ಬ ಆರೋಪಿ ಶಿವ ತಲೆಮರೆಸಿಕೊಂಡಿದ್ದಾನೆ. ಶುಕ್ರವಾರ ಸಂಜೆ ಕಚೇರಿಗೆ ನುಗ್ಗಿದ ಆರೋಪಿಗಳು ಯುವತಿಯರ ಜತೆ ಸೇರಿ ಭಾರಿ ಕೆಲಸ ಮಾಡುತ್ತೀಯಾ ಎಂದು ದಬಾಯಿಸಿ ಅಶ್ವಿನ್ ಎಂಬವರ ಕೆನ್ನೆಗೆ ಏಟು ಬಿಗಿದ್ದಿದ್ದರು. ಭರತ್ ಕಾಮತ್ ದೂರು ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement