'ಅತಿವೃಷ್ಟಿ ಹಾನಿ' ಜಿಲ್ಲಾಧಿಕಾರಿ ನೇತೃತ್ವದ ತಂಡದಿಂದ ಪರಿಶೀಲನೆ
ಉಪ್ಪಿನಂಗಡಿ: ಮುಂದಿನ ದಿನಗಳಲ್ಲಿ ಜಿಲ್ಲೆಗೆ ಆಗಮಿಸಲಿರುವ ಪ್ರಾಕೃತಿಕ ವಿಕೋಪದ ಕೇಂದ್ರ ಅಧ್ಯಯನ ತಂಡಕ್ಕೆ ಸಮಗ್ರ ಮಾಹಿತಿ ನೀಡುವ ಸಲುವಾಗಿ ದ.ಕ. ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಉಪ್ಪಿನಂಗಡಿ ಸಹಿತ ಜಿಲ್ಲೆಯ ಹಲವೆಡೆ ಅತಿವೃಷ್ಟಿಯಿಂದ ಆಗಿರುವ ಹಾನಿಯ ಬಗ್ಗೆ ಪರಿಶೀಲನೆ ನಡೆಸಿತು.
ದ.ಕ. ಜಿಲ್ಲಾಧಿಕಾರಿ ಎನ್. ಪ್ರಕಾಶ್ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ದಯಾನಂದ ನೇತೃತ್ವದಲ್ಲಿ ತೋಟಗಾರಿಕೆ, ಲೋಕೋಪಯೋಗಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳುಪರಿಶೀಲನೆ ನಡೆಸಿದರು.
ಉಪ್ಪಿನಂಗಡಿಯ ನಟ್ಟಿಬೈಲು ಪ್ರದೇಶದಲ್ಲಿ ರಸ್ತೆ ಹಾನಿಯ ಬಗ್ಗೆ ಪರಿಶೀಲನೆ ನಡೆಸಿದರು.
ಉಪ್ಪಿನಂಗಡಿಗೆ ಬರುವ ಮುನ್ನ ಬೆಳ್ತಂಗಡಿ ತಾಲೂಕಿನ ಹಲವೆಡೆ ಉಂಟಾಗಿರುವ ರಸ್ತೆ ಹಾಗೂ ಕೃಷಿ ಹಾನಿ ಬಗ್ಗೆಯೂ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿ ನಿಯೋಗದಲ್ಲಿ ಪುತ್ತೂರು ತಹಸೀಲ್ದಾರ್ ಕುಳ್ಳೇ ಗೌಡ, ಲೋಕೋಪಯೋಗಿ ಇಲಾಖೆ ಎಂಜಿನಿಯರ್, ಜಿಪಂ ಎಂಜಿನಿಯರ್, ಉಪ ತಹಸೀಲ್ದಾರ್ ಕೃಷ್ಣ ನಾಯ್ಕ್, ಕಂದಾಯ ನಿರೀಕ್ಷಕ ಮಂಜುನಾಥ್, ಗ್ರಾಮಕರಣಿಕ ಪೂವಪ್ಪ ಇದ್ದರು.