ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪಾಲಿಕೆಗಳ ಗ್ರೇಡ್ ಕುಸಿತ; ನೌಕರರ ಸವಲತ್ತು ಕಸಿತ

Rashmi Kasaragodu
Updated On : 24 Sept 2013, 11:48 am


ಮಂಗಳೂರು: ಮಂಗಳೂರು ಸೇರಿದಂತೆ ರಾಜ್ಯದ 5 ಮಹಾನಗರ ಪಾಲಿಕೆಗಳ ಗ್ರೇಡ್ ಸಂಖ್ಯೆ ಕುಸಿತಗೊಂಡಿದೆ.
 ಇದುವರೆಗೆ 'ಬಿ' ಗ್ರೇಡ್ನಲ್ಲಿದ್ದ ಮಹಾನಗರ ಪಾಲಿಕೆಗಳು ಇನ್ನು 'ಸಿ' ಗ್ರೇಡ್ಗೆ ತೃಪ್ತಿ ಪಟ್ಟುಕೊಳ್ಳಬೇಕು. ಇದರಿಂದ ಪಾಲಿಕೆ ಅನುದಾನ ಖೋತಾ ಆಗದು, ಆದರೆ ನೌಕರರ ಮನೆಭತ್ಯೆ ಸೌಲಭ್ಯ ಹೆಚ್ಚಳವಾಗದು.
 2001 ಜನಗಣತಿಯನ್ನೇ ಆಧಾರವಾಗಿಟ್ಟು ಗ್ರೇಡ್ ನಿಗದಿಪಡಿಸಲಾಗಿದೆ. ಈ ಪಾಲಿಕೆಗಳ ಜನಸಂಖ್ಯೆ 5 ಲಕ್ಷ ದಾಟದಿರುವುದೇ ಗ್ರೇಡ್ ಕುಸಿತಕ್ಕೆ ಕಾರಣ.
25 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ 'ಎ' ಗ್ರೇಡ್ನಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ನೌಕರರಿಗೆ ಮೂಲ ವೇತನದ ಶೇ.30ರಷ್ಟು, 'ಬಿ' ಗ್ರೇಡ್ನ 5 ಲಕ್ಷದಿಂದ 25 ಲಕ್ಷವರೆಗಿನ ಹುಬ್ಬಳ್ಳಿ ಧಾರವಾಡ, ಮೈಸೂರು ಪಾಲಿಕೆ ನೌಕರರಿಗೆ ಶೇ.20ರಷ್ಟು ಹಾಗೂ 5 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯ ಬಳ್ಳಾರಿ, ಬೆಳಗಾವಿ, ದಾವಣಗೆರೆ, ಮಂಗಳೂರು ಹಾಗೂ ಗುಲ್ಬರ್ಗ ಪಾಲಿಕೆಗಳ ನೌಕರರಿಗೆ ಶೇ.10ರಷ್ಟು ಮಾತ್ರ ಮನೆ ಬಾಡಿಗೆ ಭತ್ಯೆ ಸಿಗಲಿದೆ.
'ಸಿ' ದರ್ಜೆಗೆ ಇಳಿಕೆ: 1999ರಲ್ಲಿ ಸರ್ಕಾರದ ಆರ್ಥಿಕ ಇಲಾಖೆ ನಡವಳಿ ಪ್ರಕಾರ 7 ಪಾಲಿಕೆ ಪೈಕಿಗಳು 'ಬಿ' ದರ್ಜೆಯಲ್ಲಿದ್ದವು. 'ಬಿ' ದರ್ಜೆ ಪ್ರಕಾರವೇ ಪಾಲಿಕೆ ನೌಕರರು ಶೇ.10ರಷ್ಟು ಮನೆ ಬಾಡಿಗೆ ಭತ್ಯೆ ಪಡೆಯುತ್ತಿದ್ದರು. ಇದೀಗ 2013 ಸೆ.2ರಂದು ಹೊರಡಿಸಿದ (ಆದೇಶ ಸಂಖ್ಯೆ ಆಇ 14 ಎಸ್ಆರ್ಪಿ 2013)ನಡವಳಿಯಲ್ಲಿ ಪಾಲಿಕೆಗಳನ್ನು ಎ, ಬಿ, ಸಿ ಎಂದು ಮೂರು ವರ್ಗೀಕರಣ ಮಾಡಲಾಗಿದೆ. ಮಂಗಳೂರು ಸೇರಿದಂತೆ 5 ಪಾಲಿಕೆಗಳನ್ನು 'ಸಿ' ವ್ಯಾಪ್ತಿಗೆ ತರಲಾಗಿದೆ. ಅದು ಕೂಡ 2001ರ ಜನಗಣತಿ ಪ್ರಕಾರ.
ಬಿಬಿಎಂಪಿ ಸೇರ್ಪಡೆಗೊಳಿಸುವಾಗ ನಗರ ವ್ಯಾಪ್ತಿಯಲ್ಲದೆ ವಿಸ್ತರಿತ ಪ್ರದೇಶವನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ. ಆದರೆ ಉಳಿದ ಕಡೆಗಳಲ್ಲಿ ಪಾಲಿಕೆಗಳ ವಿಸ್ತರಿತ ಪ್ರದೇಶ ಸೇರ್ಪಡೆಯಲ್ಲಿ ತಾರತಮ್ಯ ಮಾಡಲಾಗಿದೆ ಎನ್ನುವುದು ಸರ್ಕಾರಿ ನೌಕರರ ಸಂಘದ ಆರೋಪ.
'ಬಿ' ದರ್ಜೆ ಇದ್ದಾಗ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬೈಕಂಪಾಡಿ ಮತ್ತು ಉಳ್ಳಾಲ ಸೇರ್ಪಡೆಗೊಂಡಿತ್ತು. ಆಗಿನ ಪ್ರಕಾರ ಪಾಲಿಕೆ ಜನಸಂಖ್ಯೆ 5.39 ಲಕ್ಷ. ಈಗ ಇವರೆಡನ್ನೂ ಕೈಬಿಡಲಾಗಿದೆ. ಕೇವಲ ಪಾಲಿಕೆ ವ್ಯಾಪ್ತಿ ಮಾತ್ರ ಇರುವುದರಿಂದ ಜನಸಂಖ್ಯೆ 4.80 ಲಕ್ಷ ಆಗಿದೆ. 5 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪಾಲಿಕೆಗೆ 'ಸಿ' ದರ್ಜೆ ನೀಡಲಾಗಿದೆ.  
ಕಡಿಮೆ ಭತ್ಯೆ: 'ಸಿ' ದರ್ಜೆ ಪಾಲಿಕೆಗಳ ನೌಕರರಿಗೆ ಮನೆ ಬಾಡಿಗೆ ಭತ್ಯೆ ಸಿಗುವುದು ಶೇ.10ರಷ್ಟು. ನಗರ ಸಭೆ, ಪಟ್ಟಣ ಪಂಚಾಯ್ತಿ, ಪುರಸಭೆಗಳಲ್ಲಿರುವಂತೆಯೇ ಮಹಾನಗರ ಪಾಲಿಕೆ ನೌಕರರಿಗೆ ಬಾಡಿಗೆ ಭತ್ಯೆ ಸಿಗಲಿದೆ. ಮಹಾನಗರದಲ್ಲಿ ಈಗ ಮನೆ ಬಾಡಿಗೆ ರು. 10 ಸಾವಿರ ವರೆಗೆ ತಲಪಿದ್ದು, ಸರ್ಕಾರದ ಈ ಮಾನದಂಡದಿಂದ ಬಾಡಿಗೆ ಭತ್ಯೆಯಲ್ಲಿ ಹೆಚ್ಚಳ ಕಾಣಲು ಸಾಧ್ಯವಿಲ್ಲ ಎನ್ನುವುದು ನೌಕರರ ಸಂಘದ ವಾದ.
 ಕೇಂದ್ರ ಸರ್ಕಾರ ಮಂಗಳೂರನ್ನು ಎಕ್ಸ್, ವೈ, ಝಡ್ ಕೆಟಗರಿಯಲ್ಲಿ ವೈ ದರ್ಜೆ ನಗರವಾಗಿ ಪರಿಗಣಿಸಿ ಶೇ.20ರ ವರೆಗೆ ಭತ್ಯೆ ನೀಡುತ್ತಿದೆ. ಆದರೆ ಅದೇ ನಗರದಲ್ಲಿರುವ ರಾಜ್ಯ ಸರ್ಕಾರಿ ನೌಕರರು ಕಡಿಮೆ ಭತ್ಯೆ ಪಡೆಯಬೇಕಾಗಿದೆ ಎನ್ನುತ್ತಾರೆ ಸೌತ್ ಕೆನರಾ ಮುನ್ಸಿಪಲ್ ಎಂಪ್ಲಾಯಿಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಭಾಸ್ಕರ್.


ಪಾಲಿಕೆಗಳನ್ನು 'ಸಿ' ದರ್ಜೆಗೆ ಬದಲಾಯಿಸಿ ನೌಕರರ ಬಾಡಿಗೆ ಭತ್ಯೆ ಹೆಚ್ಚಳಕ್ಕೆ ಕತ್ತರಿ ಹಾಕಿದ ಕ್ರಮ ಸರಿಯಲ್ಲ. ಸರ್ಕಾರಿ ಕ್ರಮದ ವಿರುದ್ಧ ಈಚೆಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗಿದೆ. ಶೀಘ್ರವೇ ಮುಖ್ಯಮಂತ್ರಿ ಭೇಟಿ ಮಾಡಿ ಮನದಟ್ಟು ಮಾಡಲಾಗುವುದು. ಇದಕ್ಕೆ ಒಪ್ಪದಿದ್ದರೆ ಸರ್ಕಾರದ ವಿರುದ್ಧವೇ ಕೋರ್ಟ್ ಮೊರೆ ಹೋಗಲಾಗುವುದು.
 ಜಾರ್ಜ್ಪಿಂಟೋ, ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ

-ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement