ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿಗಳಿಗೆ ನ್ಯಾಯಾಂಗ ಬಂಧನ
ಉಡುಪಿ: ಮಣಿಪಾಲದ ಆಂಗ್ಲ ಮಾಧ್ಯಮ ಶಾಲೆಯೊಂದರ 4 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪಿಗಳಿಗೆ ಉಡುಪಿ ಜಿಲ್ಲಾ ನ್ಯಾಯಾಲಯ ಅ. 5ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿಗಳಾದ ಶುಭಕರ್ ಕುಮಾರ್ (21) ಮತ್ತು ಸುಧೀರ್ (46) ಅವರು ಶಾಲಾ ಬಸ್ ನಿರ್ವಾಹಕರಾಗಿದ್ದು, ಸೆ. 16ರಂದು ಸಂಜೆ ಈ ಮಗುವನ್ನು ಶಾಲಾ ಬಸ್ಸಿನಲ್ಲಿ ಕರೆದುಕೊಂಡು ಹೋಗದೆ ಆಟೋದಲ್ಲಿ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿ ನಂತರ ಮನೆಗೆ ಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಒಂದೆರಡು ದಿನಗಳ ಕಾಲ ಸುಮ್ಮನಿದ್ದ ಮಗು ನಂತರ ಹೆತ್ತವರಿಗೆ ತನ್ನದೇ ಆದ ರೀತಿಯಲ್ಲಿ ವಿಷಯವನ್ನು ತಿಳಿಸಿದೆ. ನಂತರ ಮಗುವಿನ ಹೆತ್ತವರು ಶನಿವಾರ ಮಣಿಪಾಲ ಠಾಣೆಗೆ ದೂರು ನೀಡಿದ್ದಾರೆ.
ಭಾನುವಾರ ಪೊಲೀಸರು ಆರೋಪಿಯನ್ನು ಬಂಧಿಸಿ, ಸೋಮವಾರ ಬೆಳಗ್ಗೆ 11 ಗಂಟೆಗೆ ಆರೋಪಿಗಳನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಇಬ್ಬರಿಗೂ ಅ. 5ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಹೆತ್ತವರಿಂದ ಶಾಲೆಗೆ ಮುತ್ತಿಗೆ: ಸೋಮವಾರ ಮಾಧ್ಯಮಗಳ ಮೂಲಕ ವಿಷಯ ತಿಳಿಯುತ್ತಿದ್ದಂತೆ ಶಾಲೆಯ ಇತರ ಮಕ್ಕಳ ಹತ್ತಿಪ್ಪತ್ತು ಮಂದಿ ಹೆತ್ತವರು ಶಾಲೆಗೆ ಮುತ್ತಿಗೆ ಹಾಕಿ ಶಾಲೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅಂದು ಆ ಮಗು ಬಸ್ ತಪ್ಪಿಸಿಕೊಂಡದ್ದರಿಂದ ಅದನ್ನು ಆಟೋದಲ್ಲಿ ಇಬ್ಬರು ಸಿಬ್ಬಂದಿ ಉಸ್ತುವಾರಿಯಲ್ಲಿ ಆಟೋದಲ್ಲಿ ಮನೆಗೆ ಕಳುಹಿಸಲಾಯಿತು. ಈ ಬಗ್ಗೆ ಆ ಮಗುವಿನ ಹೆತ್ತವರಿಗೂ ತಿಳಿಸಲಾಗಿತ್ತು ಎನ್ನುವ ಶಾಲೆಯ ಹೇಳಿಕೆ ಸುಳ್ಳು. ಶಾಲೆಯಿಂದ ಹೆತ್ತವರಿಗೆ ಯಾವುದೇ ಮಾಹಿತಿ ನೀಡಲಾಗಿಲ್ಲ, ಇತರ ಶಾಲೆಗಳಲ್ಲಿ ಇರುವಂತೆ ಈ ಶಾಲೆಯಲ್ಲಿ ಶಿಕ್ಷಕ ರಕ್ಷರ ಸಂಘ ಕೂಡ ಇಲ್ಲ, ತಮ್ಮಿಂದ ವಿಪರೀತ ಶುಲ್ಕ ವಸೂಲಿ ಮಾಡುತ್ತಾರೆ, ಆದರೆ ಮಾಹಿತಿ ಪಡೆದುಕೊಳ್ಳಲು ಬಂದರೆ ತಮ್ಮನ್ನು ಒಳಗೆ ಕರೆಯದೆ ಹೊರಗೆ ಬಿಸಿಲಿನಲ್ಲಿಯೇ ನಿಲ್ಲಿಸಲಾಗಿದೆ ಎಂದು ಹೆತ್ತವರು ಮಾಧ್ಯಮಗಳ ಮುಂದೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಇಷ್ಟೆಲ್ಲಾ ಆದರೂ ಶಾಲೆಯ ಪ್ರಾಂಶುಪಾಲರಾಗಲಿ, ಆಡಳಿತಾಧಿಕಾರಿಗಳಾಗಲಿ ಮಾಧ್ಯಮ ಮುಂದೆ ಬಂದು ಮಾಹಿತಿ ನೀಡುವುದಕ್ಕೆ ಮುಂದಾಗಲಿಲ್ಲ.