ಸರ್ಕಾರಿ ಶಾಲೆಯಲ್ಲಿ ತರ್ಕಾರಿ ಮೇಳ
ವಿಟ್ಲ: ಸರ್ಕಾರಿ ಪ್ರೌಢ ಶಾಲೆ ಕಲ್ಲಂಗಳ ಕೇಪು ಅಕ್ಷರಶಹ ತರಕಾರಿ ಮಾರುವ ಸಂತೆಯಾಗಿತ್ತು. ವಿದ್ಯಾರ್ಥಿಗಳು ತಾವು ಮನೆಯಲ್ಲಿ ಬೆಳೆದ ಸಾವಯವ ತರಕಾರಿಗಳನ್ನು ತಂದು ಶಾಲೆಯ ಕೃತಕ ಮಾರುಕಟ್ಟೆಯಲ್ಲಿ ಹೆಮ್ಮೆಯಿಂದ ಮಾರಾಟ ಮಾಡುತ್ತಿದ್ದರು. ಹೆತ್ತವರೊಂದಿಗೆ ತಮ್ಮ ಪರಿಶ್ರಮವನ್ನು ಜೋಡಿಸಿ ಬೆಳೆಸಿದ ತರ್ಕಾರಿಗಳನ್ನು ಪ್ರದರ್ಶಿಸಿ, ಸಹಪಾಠಿಗಳು ಹಾಗೂ ಶಿಕ್ಷಕರೊಂದಿಗೆ ತರಕಾರಿ ಸಂತೆಯಲ್ಲಿ ತಮ್ಮನ್ನು ತೊಡಗಿಕೊಂಡು ಸಂಭ್ರಮಿಸಿದರು.
ಸಾವಯವ ಆಹಾರ ಸರಣಿಯ ನಿರಂತರ ಕಾರ್ಯಕ್ರಮಗಳ ಸಮಾರೋಪ ಮತ್ತು ಸಾವಯವ ತರಕಾರಿ ಮೇಳವನ್ನು ಸರ್ಕಾರಿ ಪ್ರೌಢ ಶಾಲೆ ಕಲ್ಲಂಗಳ ಕೇಪು ಇಲ್ಲಿ ನಡೆಸಲಾಯಿತು. ತರಕಾರಿ ಬೆಳೆಸಲು ಬೀಜ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಗಳನ್ನು ಕೊಡಿಸಿ ಪಾಠದೊಂದಿಗೆ ಕೃಷಿಯನ್ನು ಉತ್ತೇಜಿಸಿರುವ ಶಾಲಾ ಶಿಕ್ಷಕರ ಶ್ರಮವನ್ನು ವಿಜಯಾ ಬ್ಯಾಂಕ್ ಕೃಷಿ ಪ್ರತಿಷ್ಠಾನ ಮಂಗಳೂರು ಇದರ ಸಹಾಯಕ ಪ್ರಬಂಧಕ ಸದಾಶಿವ ಆಚಾರ್ ಪ್ರಶಂಸಿಸಿದರಲ್ಲದೆ ಸಂತೆಯನ್ನು ಪ್ರಥಮ ಖರೀದಿಯೊಂದಿಗೆ ಉದ್ಘಾಟಿಸಿ, ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಪ್ರಕಟಿಸಿದರು.
ಈ ವಿಶಿಷ್ಟ ಕಾರ್ಯಕ್ರಮದ ಹಿಂದೆ ಶಾಲಾ ಮುಖ್ಯ ಶಿಕ್ಷಕ ರಮೇಶ ಎಂ ಬಾಯಾರ್ ಅವರ ಆಳವಾದ ಮಾರ್ಗದರ್ಶನ ಇರುವುದನ್ನು ಅವರು ಉಲ್ಲೇಖಿಸಿದರು. ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಎಂ. ರಮೇಶ್ ಬಾಯಾರ್ ಅವರು ಮೇಳದ ಉದ್ದೇಶದ ಬಗ್ಗೆ ಮಾಹಿತಿದರು.
ತಜ್ಞರಿಂದ ತಿಳಿವಳಿಗೆ: ನೇತ್ರಾವತಿ ಸಾವಯವ ಪರಿವಾರ ಮಂಗಳೂರು, ವಿಜಯಾ ಬ್ಯಾಂಕ್ ಕೃಷಿ ಪ್ರತಿಷ್ಠಾನ ಮಂಗಳೂರು ಬಿಲ್ಲಂಪದವು ನಾರಾಯಣ ಭಟ್, ಮುಳಿಯ ವೆಂಕಟಕೃಷ್ಣ ಶರ್ಮ, ಸವಿತಾ ಎಸ್. ಭಟ್ ಅಡ್ವಾಯಿ, ನಾ.ಕಾರಂತ ಪೆರಾಜೆ, ಕೃಷ್ಣಪ್ಪ ಪುರುಷ ಬೀಜದಡ್ಕ ಮೊದಲಾದವರ ಸಹಯೋಗ ಪಡೆದು ಮಕ್ಕಳಿಗೆ, ಸಾವಯವ ಆಹಾರ ಬೆಳೆಸುವ ಅನಿವಾರ್ಯತೆಯ ಬಗ್ಗೆ ತಿಳಿವಳಿಕೆಗಳನ್ನು ಕಾಲ ಕಾಲಕ್ಕೆ ನೀಡಲಾಗಿದೆ. ಸಾವಯವ ಆಹಾರ ಸರಣಿಯನ್ನು ಮುಂದೆ ಅಮೃತ ಪಾತ್ರೆ ಎಂಬ ಹೆಸರಿನಲ್ಲಿ ಮುಂದುವರಿಸುವ ಇಂಗಿತವಿದೆ ಎಂದು ಅವರು ಹೇಳಿದರು.
ಶಿಕ್ಷಕರಾದ ಲಕ್ಷ್ಮಣ ಟಿ. ನಾಯಕ್, ಗೌರಿದೇವಿ, ಕೆ.ಜಿ. ಸುಬ್ರಹ್ಮಣ್ಯ ಭಟ್, ಲಿಂಗಪ್ಪ ನಾಯ್ಕ್ ಎ, ಜಯಾ ಪಿ, ರಮೇಶ ಡಿ. ಮತ್ತು ಗೀತಾ ಎನ್. ಇವರು ಕಾರ್ಯಕ್ರಮದ ಯಶಸ್ಸಿನಲ್ಲಿ ತಮ್ಮನ್ನು ಅತ್ಯಂತ ಸಮರ್ಪಕವಾಗಿ ತೊಡಗಿಸಿಕೊಂಡರು.