ಕ್ಯಾಂಟೀನ್ಗೆ ಲಗ್ಗೆ ಇಟ್ಟ ಕೆಎಫ್ಡಿಸಿ ಸೀಫುಡ್!
ಮಂಗಳೂರು: ರಾಜ್ಯದಲ್ಲಿ ಹವಾನಿಯಂತ್ರಿತ ಮೀನು ಮಾರಾಟ ಮಳಿಗೆ ಜತೆ 'ಮತ್ಸ್ಯದರ್ಶಿನಿ ಕ್ಯಾಂಟೀನ್' ಕೂಡ ಮೀನು ಪ್ರಿಯರನ್ನು ಆಕರ್ಷಿಸುತ್ತಿದೆ.
ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ (ಕೆಎಫ್ಡಿಸಿ)ಈ ಹೊಸ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದು, ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿ ಕಳೆದ ವರ್ಷ ನವೀಕರಿಸಿ ಕಲಾತ್ಮಕಗೊಳಿಸಿದ ಮತ್ಸ್ಯದರ್ಶಿನಿ ಕ್ಯಾಂಟಿನ್ ಲಾಭದಾಯಕವಾಗಿ ಮುನ್ನಡೆಯುತ್ತಿದೆ. ಇದೇ ರೀತಿಯ ಕ್ಯಾಂಟಿನ್ಗಳನ್ನು ಇಂದಿರಾ ನಗರ, ತುಮಕೂರು ಮತ್ತು ದಾವಣಗೆರೆಯಲ್ಲಿ ತೆರೆಯಲಾಗಿದೆ.
ಕಬ್ಬನ್ ಪಾರ್ಕ್ ಕ್ಯಾಂಟೀನ್ ಮಿತದರದಲ್ಲಿ ಮೀನಿನ ಉತ್ಪನ್ನಗಳನ್ನು ನೀಡುವುದರಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ದಿನಂಪ್ರತಿ ಒಂದು ಸಾವಿರಕ್ಕೂ ಅಧಿಕ ಮಂದಿ ಕ್ಯಾಂಟೀನ್ಗೆ ಭೇಟಿ ನೀಡುತ್ತಿದ್ದು, ವಹಿವಾಟು ರು. 1.50ರಿಂದ ರು. 2 ಲಕ್ಷ ದಾಟುತ್ತದೆ. ಗುಣಮಟ್ಟದ ಆಹಾರ, ಊಟ ಇಲ್ಲಿನ ವಿಶೇಷ.
ಈ ಮಾದರಿಯ ಕ್ಯಾಂಟಿನ್ಗಳನ್ನು ಮೈಸೂರು, ಯಲಹಂಕ ಹಾಗೂ ಮಂಗಳೂರಲ್ಲಿ ಪ್ರಾರಂಭಿಸಲು ಕೆಎಫ್ಡಿಸಿ ನಿರ್ಧರಿಸಿದೆ.
ಕೈಗೆಟಕುವ ದರ: ಮಾಂಸಹಾರಿ ಹೊಟೇಲ್ಗಳಲ್ಲಿ ದುಬಾರಿ ದರವಾದರೆ, ಇಲ್ಲಿ ಕೈಗೆಟಕುವ ದರದಲ್ಲಿ ತಿಂಡಿ, ತಿನಿಸು ಲಭ್ಯ. ರಾಜ್ಯದಲ್ಲಿರುವ ಎಲ್ಲ ಕ್ಯಾಂಟಿನ್ಗಳಲ್ಲೂ ಏಕರೂಪದ ದರ ನಿಗದಿಪಡಿಸಲಾಗಿದೆ.
ಅನ್ನ, ಮೀನಿನ ಸಾರು/ಮುದ್ದೆ/ಚಪಾತಿ ಊಟ ಸೇರಿದಂತೆ 17 ಬಗೆಯ ಮೀನಿನ ಐಟಂಗಳು ಇರುತ್ತವೆ. ಮೀನಿನ ಊಟಕ್ಕೆ ರು. 100ರಿಂದ ರು. 120 ದರ. ಸಂಜೆ ಉಪಹಾರಕ್ಕೆ ಪ್ರತ್ಯೇಕ ಮೆನು. ಫಿಶ್ ಕಟ್ಲೇಟ್ ಸೇರಿದಂತೆ 16 ವಿವಿಧ ಖಾದ್ಯ.
ಮೀನಿನ ಬಿರಿಯಾನಿ, ಅಂಜಾಲ್ ಫ್ರೈ, ಮೀನಿನ ಕಬಾಬ್, ಸಿಗಡಿ ಫ್ರೈ, ಬಂಗುಡೆ ಫ್ರೈ, ಮಾಂಜಿ ಫ್ರೈ, ಕಾಣೆ ಮೀನು ಫ್ರೈ, ಫಿಶ್ ಚಿಲ್ಲಿ, ಫಿಶ್ ಮಂಚೂರಿ, ಮೀನಿನ ಸಾಸೇಜ್ ಮಧ್ಯಾಹ್ನಕ್ಕಾದರೆ, ಸಂಜೆಗೆ ಬಟರ್ಫ್ಲೈ ಪ್ರೌನ್ಸ್, ಫಿಶ್ ಫಿಂಗರ್, ಫಿಶ್ ಫ್ರೈಡ್ರೈಸ್, ಫಿಶ್ ನೂಡಲ್ಸ್, ಪಿಶ್ ಸಮೋಸ, ಫಿಶ್ ಫಿಲ್ಲೆಟ್, ಗ್ರಿಲ್ ಫಿಶ್, ಪ್ರೌನ್ ಚಿಲ್ಲಿ, ಪ್ರೌನ್ ಮಂಚೂರಿ ಇತ್ಯಾದಿ ಬಗೆಬಗೆಯ ತಿನಿಸುಗಳಿವೆ.
ಈ ಕ್ಯಾಂಟೀನ್ಗಳಲ್ಲಿ ಕೇವಲ ಊಟ ತಿಂಡಿ ಮಾತ್ರವಲ್ಲ ತಾಜಾ ಮೀನು, ಮೀನಿನ ಉತ್ಪನ್ನಗಳ ಫ್ಯಾಮಿಲಿ ಪ್ಯಾಕ್, ಅಕ್ವೇರಿಯಂ ಕೂಡ ಲಭ್ಯ.
ರಾಜ್ಯದ 15 ಜಿಲ್ಲೆಗಳಲ್ಲಿ ಈಗಾಗಲೇ ಹವಾನಿಯಂತ್ರಿತ ಮೀನು ಮಾರಾಟ ಮಳಿಗೆಗಳಿದ್ದು, ಇದರ ಹೊರತಾಗಿ ಕ್ಯಾಂಟಿನ್ಗಳನ್ನು ಜನಸಾಮಾನ್ಯರ ಉಪಯೋಗಕ್ಕೆ ಸುಲಭವಾಗಲು ಕೆಎಫ್ಡಿಸಿ ನಿರ್ಮಿಸಿದೆ.
ಇನ್ನಷ್ಟು ಮೀನು ಮಾರುಕಟ್ಟೆ: ಪ್ರೊಟೀನ್ ಅಂಶ ಹೇರಳವಾಗಿರುವ ಮೀನನ್ನು ಇನ್ನಷ್ಟು ಜನರಿಗೆ ತಲುಪಿಸಲು ರು. 2 ಕೋಟಿ ವೆಚ್ಚದಲ್ಲಿ 20 ಕಡೆ ಮೀನು ಮಾರುಕಟ್ಟೆ ತೆರೆಯಲಿದೆ. 10 ಮೀನು ಮಾರುಕಟ್ಟೆ ಕಾಮಗಾರಿ ಇನ್ನು ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಒಂದು ಮಾರುಕಟ್ಟೆಗೆ ತಲಾ ರು. 10 ಲಕ್ಷ ವಿನಿಯೋಗಿಸಲಾಗುತ್ತದೆ.
ಮಂಗಳೂರಿನ ಕೆಎಫ್ಡಿಸಿ ಕಚೇರಿ ಆವರಣದಲ್ಲಿ ದಿನಕ್ಕೆ 500 ಟನ್ ಸಾಮರ್ಥ್ಯದ ಮೀನು ಸಂಸ್ಕರಣೆಯ ಘಟಕ ರೂಪುಗೊಳ್ಳುತ್ತಿದ್ದು, ರು. 5 ಕೋಟಿ ವೆಚ್ಚವಾಗಲಿದೆ. 4 ತಿಂಗಳಲ್ಲಿ ಕಾಮಗಾರಿ ಮುಕ್ತಾಯಗೊಳ್ಳಲಿದೆ. ಬಳಿಕ ವಿದೇಶಕ್ಕೆ ತಾಜಾ ಮೀನನ್ನು ವಿಮಾನ ಮೂಲಕ ರಫ್ತು ಮಾಡಲು ಸುಲಭವಾಗಲಿದೆ.
- ಆತ್ಮಭೂಷಣ್