ದೇಶದ ಸಮಸ್ಯೆಗೆ ರಾಮಕಥೆ ಉತ್ತರ: ಡಾ.ಹೆಗ್ಗಡೆ
ಬೆಳ್ತಂಗಡಿ: ಎಲ್ಲ ಸದ್ಗುಣಗಳ ಪ್ರತೀಕ ರಾಮಾಯಣ. ರಾಮಕಥೆಯ ಮಾಧ್ಯಮದಲ್ಲಿ ಹೊಸ ಪರಂಪರೆಯನ್ನೇ ಹುಟ್ಟು ಹಾಕಿರುವುದು ಶ್ರೀ ರಾಘವೇಶ್ವರ ಸ್ವಾಮೀಜಿಯವರ ವಿಶೇಷತೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಶ್ರೀರಾಮಕಥಾ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾತು ನಮ್ಮ ವ್ಯಕ್ತಿತ್ವದ ಪ್ರತೀಕ. ಯೋಗ್ಯವಾದ ಮಾತು ಸಂಸ್ಕಾರದಿಂದ ಬರುತ್ತದೆ. ದೇಶದ ಸಮಸ್ಯೆಗಳ ನಿವಾರಣೆಗೆ ರಾಮಕಥೆಯಲ್ಲಿ ಉತ್ತರವಿದೆ. ಸ್ವಾಮೀಜಿಯವರು ಉತ್ತರ ಭಾರತಕ್ಕೆ ಹೋಗುವವರಿದ್ದರೂ ಅಲ್ಲಿನ ಕಾರ್ಯಕ್ರಮಗಳನ್ನು ಮುಂದೂಡಿ ಕ್ಷೇತ್ರಕ್ಕೆ ಬಂದು ರಾಮಕಥೆಯನ್ನು ಪ್ರಸ್ತುತಪಡಿಸುತ್ತಿರುವುದು ಸಂತಸ ತಂದಿದೆ ಎಂದರು.
ಶ್ರೀ ರಾಘವೇಶ್ವರ ಸ್ವಾಮೀಜಿ ಮಾತನಾಡಿ, ಕಲಿಯುಗದಲ್ಲಿ ಆಶ್ರಯವನ್ನರಸಿ ಹೋಗುತ್ತಿದ್ದ ಧರ್ಮಕ್ಕೆ ನೆಲೆ ಸಿಕ್ಕಿದ್ದು ಧರ್ಮಸ್ಥಳ. ಲಕ್ಷಾಂತರ ಜನರ ಸರಿ ತೂಕ ಇರುವವನೇ ಲಕ್ಷಾಂತರ ಜನರನ್ನು ಆಳಬಲ್ಲ. ಅಂಥವರಲ್ಲಿ ಡಾ.ಹೆಗ್ಗಡೆಯವರೂ ಒಬ್ಬರು. ಮಂಜುನಾಥನ ಆಸ್ಥಾನದಲ್ಲಿ ರಾಮಕಥೆಯನ್ನು ಪ್ರಸ್ತುತಪಡಿಸುತ್ತಿದ್ದೇವೆ. ಈ ಕಥೆ ಜೀವನಕ್ಕೊಂದು ಪಾಠ, ಮನೋರಂಜನೆ ಅಲ್ಲ ಎಂದರು.
ವೈಭವದ ಮೆರವಣಿಗೆ: ಪ್ರಾರಂಭದಲ್ಲಿ ಬೀಡಿನಿಂದ ಸಭಾಭವನದವರೆಗೆ ಶ್ರೀರಾಮಾಯಣ ಗ್ರಂಥ ಹಾಗೂ ಶ್ರೀರಾಮ ಪರಿವಾರದ ಮೂರ್ತಿಗಳ ಸಹಿತ ಸ್ವಾಮೀಜಿ ಅವರನ್ನು ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು. ಪುರುಷಸೂಕ್ತ ಪಠಣದೊಂದಿಗೆ ಗ್ರಂಥದ ಪೂಜೆಯನ್ನು ಶ್ರೀಗಳು ನೆರವೇರಿಸಿದರು. ಡಾ.ಹೆಗ್ಗಡೆ, ಸುರೇಂದ್ರ ಕುಮಾರ್, ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಸುಳ್ಯ ಶಾಸಕ ಎಸ್.ಅಂಗಾರ, ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಹರ್ಷೇಂದ್ರ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್ ರಾಮಾಯಣ ಗ್ರಂಥಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಸಂಸದ ನಳಿನ್ ಕುಮಾರ್ ಕಟೀಲು ಮತ್ತಿತರರು ಇದ್ದರು.
ಮನಸೆಳೆದ ರಾಮಕಥೆ
ರಾಮಾಯಣದ ಉತ್ತರಕಾಂಡದಲ್ಲಿನ ಕೈಲಾಸದ ಮೇಲೆ ರಾವಣನು ಆಕ್ರಮಿಸಿದ ಕಥೆಯ ಮೂಲಕ 5 ದಿನಗಳ ರಾಮಕಥೆಗೆ ಶ್ರೀಗಳು ಚಾಲನೆ ನೀಡಿದರು. ಸಾಂಬ ಸದಾಶಿವ ಭಜನೆ, ನೀರ್ನಳ್ಳಿ ಗಣಪತಿ ಭಟ್ ಅವರ ಕುಂಚದ ಕಲ್ಪನೆ, ಅಭೂತ ಪೂರ್ವ ವೇದಿಕೆ, ಮಾರುತಿ ಪೀಠ ಸಹಸ್ರಾರು ಜನರನ್ನು ಆಕರ್ಷಿಸಿತು. ಕಥೆ ಮತ್ತು ಕಲೆಯನ್ನು ಸುಂದರವಾಗಿ ಹೆಣೆದು ಕಥಾದರ್ಶನದ ಮೂಲಕ ಶ್ರೀಗಳು ಮಾಡಿದ ರಾಮಕಥೆಯ ಅನಾವರಣ 3 ಗಂಟೆ ಕಾಲ ಶ್ರೋತೃಗಳನ್ನು ಮೋಡಿ ಮಾಡಿತು.