ಹಾಗೆ ಬಂದು ಹೀಗೆ ಹೋದರು!
ಬಂಟ್ವಾಳ: ಸಾಲುಸಾಲು ವಾಹನಗಳು ರಸ್ತೆಯಲ್ಲಿ ಸೈರನ್ ಮೊಳಗಿಸುತ್ತ ಸಾಗುತ್ತಿದ್ದರೆ ಎಲ್ಲರೂ ಹುಬ್ಬೇರಿಸಿ ನೋಡಿದ್ದೇ ಬಂತು.. ಇಷ್ಟೊಂದು ವಾಹನಗಳು ಯಾಕೆ ಬಂದವು ಎಂದು ಗ್ರಾಮಸ್ಥರು ಯೋಚಿಸುತ್ತಿದ್ದಂತೆ ಇವರ ಅಧ್ಯಯನವೂ ಮುಗಿದಿರುತ್ತಿತ್ತು!
ಇದು ಕೊಳೆ ರೋಗದಿಂದ ತತ್ತರಿಸಿದ ಹಾಗೂ ಮಳೆಹಾನಿಗೀಡಾದ ರಸ್ತೆಗಳ ಪರಿಶೀಲನೆಗೆ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಆರ್.ಕೆ. ಶ್ರೀವಾತ್ಸವ್ ನೇತೃತ್ವದ ಅಧ್ಯಯನ ತಂಡ ತಾಲೂಕಿನಲ್ಲಿ ಅಧ್ಯಯನ ನಡೆಸಿದ ರೀತಿ.
ಬಂದರು.. ಹೋದರು!: ತಾಲೂಕಿನ ಹಲವು ಗ್ರಾಮಗಳಲ್ಲಿ ಅಧ್ಯಯನ ತಂಡದ ಪ್ರವಾಸಕ್ಕೆ ವ್ಯವಸ್ಥೆ ಮಾಡಲಾಗಿತ್ತಾದರೂ, ಮಂಗಳವಾರ ಬಂಟ್ವಾಳಕ್ಕೆ ಭೇಟಿ ನೀಡಿದ ತಂಡ ತಾಲೂಕಿನ ನಲ್ಕೆಮಾರ್ ಪರಿಸರದ ಅಡಕೆ ತೋಟಗಳನ್ನು ವೀಕ್ಷಿಸಿ, ಕೆಂಪುಗುಡ್ಡೆ ರಸ್ತೆಯನ್ನು ಮಾತ್ರ ಪರಿಶೀಲನೆ ನಡೆಸಿ ತೆರಳಿದೆ. ಪೊಳಲಿ ಕೈಕಂಬ ಮಾರ್ಗವಾಗಿ ಬಂಟ್ವಾಳ ಪ್ರವೇಶಿಸಿದ ತಂಡ, ಅಮ್ಟಾಡಿ ಗ್ರಾಮದ ನಲ್ಕೆಮಾರ್ ಎಂಬಲ್ಲಿಗೆ ತೆರಳಿ ಕೊಳೆ ರೋಗದಿಂದ ಹಾನಿಗೀಡಾದ ರಿಚರ್ಡ್ ಮೊಂತೆರೋ, ವೆರೊನಿಕಾ ಡಿಸೋಜಾ, ಆಲ್ವಿನ್ ಡಿಸೋಜ, ಅಲ್ಫಾನ್ಸ್ ಡಿಸೋಜ ಮೊದಲಾದವರ ಕೃಷಿ ಜಮೀನುಗಳನ್ನು ವೀಕ್ಷಿಸಿತು.
ಒಂದು ಕಡೆಯಲ್ಲಿ ಮಾತ್ರ ಕಾರಿನಿಂದಿಳಿದ ಅಧಿಕಾರಿಗಳು ಕೃಷಿಕರೊಂದಿಗೆ ಮಾತುಕತೆ ನಡೆಸಿದರು. ಕೆಂಪುಗುಡ್ಡೆ ರಸ್ತೆ ಹಾಗೂ ನೆರೆ ವಿಮೋಚನಾ ರಸ್ತೆಯಲ್ಲಿ ಹಾನಿಗೀಡಾದ ಸೇತುವೆಯನ್ನೂ ತಂಡ ಪರಿಶೀಲನೆ ನಡೆಸಿತು. ತಾಲೂಕಿನ ಕೆಲವೆಡೆ ಅಧಿಕಾರಿಗಳ ಬರುವಿಕೆಗೆ ಕೃಷಿಕರು ಕಾಯುತ್ತಿರುವಂತೆಯೇ, ಅಧ್ಯಯನ ತಂಡ ಬಂಟ್ವಾಳಕ್ಕೆ ವಿದಾಯ ಹೇಳಿ ಪುತ್ತೂರಿನತ್ತ ತೆರಳಿ ಆಗಿತ್ತು. ಬಂಟ್ವಾಳಕ್ಕೆ ಬಂದಿದ್ದೇವೆ ಎನ್ನುವುದಕ್ಕೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕೆಲಕಾಲ ವಿಶ್ರಮಿಸಿ ಚಹಾ- ಬಿಸ್ಕೆಟ್ ಸೇವಿಸಿ ಬಳಿಕ ಹೊರಟರು.
ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಪ್ರಾದೇಶಿಕ ಅಧಿಕಾರಿ ಸಂಜಯ್ ಗರ್ಗರ್, ಯೋಜನಾ ಆಯೋಗದ ಹಿರಿಯ ಸಂಶೋಧನಾಧಿಕಾರಿ ಮುರಳೀಧರನ್, ಚೆನ್ನೈ ತಂಬಾಕು ಅಭಿವೃದ್ಧಿಸೊಸೈಟಿಯ ಪ್ರಭಾರ ನಿರ್ದೇಶಕ ಕೆ.ಮನೋಹರನ್ ತಂಡದಲ್ಲಿದ್ದರು. ದ.ಕ. ಜಿಲ್ಲಾಧಿಕಾರಿ ಎನ್.ಪ್ರಕಾಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ, ತೋಟಗಾರಿಕೆ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಎಚ್.ಆರ್. ಯೋಗೀಶ್, ಮಂಗಳೂರು ಸಹಾಯಕ ಆಯುಕ್ತ ಪ್ರಶಾಂತ್, ತಾಲೂಕು ತಹಸೀಲ್ದಾರ್ ಮಲ್ಲೇಸ್ವಾಮಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಸಂಜೀವ ನಾಯಕ್, ಜಿ.ಪಂ. ಎಂಜಿನಿಯರ್ ಉಪಸ್ಥಿತರಿದ್ದು, ತಾಲೂಕಿನ ಸಮಸ್ಯೆಗಳ ಬಗ್ಗೆ ತಂಡಕ್ಕೆ ಮನವರಿಕೆ ಮಾಡಿದರು.
ಸಮಗ್ರ ಮಾಹಿತಿ ಕೊಟ್ಟಿದ್ದೇವೆ: ಡಿಸಿ
ಅಧ್ಯಯನ ತಂಡದ ಪರಿಶೀಲನೆ ವೇಳೆ ನಲ್ಕೆಮಾರ್‌ನಲ್ಲಿ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್.ಪ್ರಕಾಶ್, ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಹಾನಿ ಬಗ್ಗೆ ಕೇಂದ್ರದ ಅಧ್ಯಯನ ತಂಡದ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು. ಪ್ರತಿ ತಾಲೂಕುಗಳನ್ನು ಸಂಪರ್ಕಿಸಿ, ಕೊಳೆ ರೋಗದಿಂದ ಹಾನಿಗೀಡಾದ ತೋಟಗಳನ್ನು ಪರಿಶೀಲಿಸಲಾಗಿದೆ, ಹಾನಿಗೀಡಾದ ರಸ್ತೆಗಳ ಬಗ್ಗೆ ತಂಡಕ್ಕೆ ವಿವರಣೆ ಹಾಗೂ ನಷ್ಟದ ಅಂದಾಜು ನೀಡಲಾಗಿದೆ ಎಂದವರು ತಿಳಿಸಿದರು.
ಕಾಟಾಚಾರದ ಸಮೀಕ್ಷೆ: ಶಾಸಕಿ ಆರೋಪ
ಪ್ರಾಕೃತಿಕ ವಿಕೋಪದ ಅಧ್ಯಯನ ನಡೆಸಲು ಕೇಂದ್ರದಿಂದ ಆಗಮಿಸಿದ ತಂಡ ಇಲ್ಲಿನ ಜನಪ್ರತಿನಿಧಿಗಳು ಹಾಗೂ ರೈತರನ್ನು ವಿಶ್ವಾಸಕ್ಕೆ ಪಡೆದುಕೊಳ್ಳದೆ ಕಾಟಾಚಾರದ ಸಮೀಕ್ಷೆ ನಡೆಸಿದ್ದು, ಬಂದರು ಹೋದರು ಎಂಬಂತಾಗಿದೆ. ಸಮರ್ಪಕವಾದ ಸಮೀಕ್ಷೆಯಾಗಿಲ್ಲ ಎಂದು ಶಾಸಕಿ ಶಕುಂತಳಾ ಶೆಟ್ಟಿ ಆರೋಪಿಸಿದ್ದಾರೆ. ಪುತ್ತೂರಿಗೆ ಆಗಮಿಸಿದ ಕೇಂದ್ರ ಸಮೀಕ್ಷಾ ತಂಡ ಇಲ್ಲಿನ ಪ್ರವಾಸಿ ಬಂಗಲೆಯಲ್ಲಿರುವ ಬಗ್ಗೆ ಮಾಹಿತಿ ಅರಿತು ಇಲ್ಲಿಗೆ ಆಗಮಿಸಿದ ಶಾಸಕಿ, ಅವರೊಂದಿಗೆ ಮಾಹಿತಿ ಪಡೆದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕೇಂದ್ರ ಸಮಿತಿ ತಂಡ ಆಗಮಿಸುವ ಸಂದರ್ಭ ಈ ಕ್ಷೇತ್ರದ ಶಾಸಕಿಯಾಗಿರುವ ತನ್ನ ಗಮನಕ್ಕೆ ತರಬೇಕಿತ್ತು. ತನಗೆ ತಹಸೀಲ್ದಾರರು ಕಡೇ ಕ್ಷಣದಲ್ಲಿ ತಿಳಿಸಿದ್ದಾರೆ. ಆದರೂ ತಾನು ಪೂರ್ತಿ ನಾಶವಾಗಿರುವ ಕಡೆಗೆ ತೆರಳಿ ಸಮೀಕ್ಷೆ ನಡೆಸುವಂತೆ ಹೇಳಿದ್ದೆ. ಆದರೆ ತಂಡ ರಸ್ತೆ ಬದಿಯಲ್ಲಿರುವ ಅಡಕೆ ತೋಟಕ್ಕೆ ಹೋಗಿಲ್ಲ. ನಷ್ಟಕ್ಕೊಳಗಾದ ರೈತರಿಂದ ಯಾವುದೇ ಮಾಹಿತಿ ಪಡೆದಿಲ್ಲ. ಈ ಬಗ್ಗೆ ಪ್ರಶ್ನಿಸಿದ ತನಗೂ ಸಮರ್ಪಕ ಉತ್ತರ ನೀಡದೆ ಮಡಿಕೇರಿಗೆ ತೆರಳಿದ್ದಾರೆ ಎಂದು ಆರೋಪಿಸಿದರು. ಈ ಬಗ್ಗೆ ತಾನು ಕೇಂದ್ರ ಸಚಿವರಾದ ಆಸ್ಕರ್ ಫರ್ನಾಂಡಿಸ್, ವೀರಪ್ಪ ಮೈಲಿ ಗಮನಕ್ಕೆ ತರುವುದಾಗಿ ತಿಳಿಸಿದರು. ಶಾಸಕರೊಂದಿಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪುರಸಭಾ ಸದಸ್ಯ ಮಹಮ್ಮದ್ ಆಲಿ, ಶಕ್ತಿ ಸಿನ್ಹಾ, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಹೊನ್ನಪ್ಪ ಪೂಜಾರಿ, ಕಾರ್ಮಿಕ ಘಟಕದ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು, ಮಹಮ್ಮದ್ ಕಂಚಿಲ್ ಕುಂಜ, ಯುವ ಕಾಂಗ್ರೆಸ್‌ನ ಅಧ್ಯಕ್ಷ ಶ್ರೀರಾಂ ಪಕ್ಕಳ, ಪದಾಧಿಕಾರಿಗಳಾದ ಅರ್ಶದ್ ಮೊಯ್ದೀನ್ ದರ್ಬೆ, ಕೃಷ್ಣ ಪ್ರಸಾದ್ ಆಳ್ವ ಇದ್ದರು.