28ರಂದು ಆಕಾಶವಾಣಿ ಸಂಗೀತ ಸಮ್ಮೇಳನ
ಮಂಗಳೂರು: ದೇಶದ 58 ಕಡೆಗಳಲ್ಲಿ ಆಯೋಜಿಸಿದ ಆಕಾಶವಾಣಿ ಸಂಗೀತ ಸಮ್ಮೇಳನ ಅಂಗವಾಗಿ ಈ ಬಾರಿ 2 ಕಛೇರಿ ಮಂಗಳೂರಿನಲ್ಲಿ ಸೆ.28ರಂದು ನಡೆಯಲಿದೆ ಎಂದು ಮಂಗಳೂರು ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಡಾ.ವಸಂತ ಕುಮಾರ್ ಪೆರ್ಲ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಪುರಭವನದಲ್ಲಿ ಸಂಜೆ 6ಕ್ಕೆ ಆಹ್ವಾನಿತ ಶ್ರೋತೃಗಳ ಸಮ್ಮುಖ ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಶೈಲಿಯ ಸಂಗೀತ ಪ್ರಸ್ತುತಗೊಳ್ಳಲಿದೆ. ವಿದುಷಿ ಕೊಲ್ಕೊತ್ತಾ ಪದ್ಮಾವತಿ ಸುರನಾಥನ್ರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಗೆ ತಿರುವನಂತಪುರ ಈಶ್ವರ ವರ್ಮ ವಯಲಿನ್, ಕೊಲ್ಕತ್ತಾ ಅರವಿಂದ್ ಮೃದಂಗ ಮತ್ತು ರಾಜರಾಜನ್ ಘಟಂನಲ್ಲಿ ಸಹಕರಿಸುವರು. ಬಳಿಕ ವಿದುಷಿ ಕಲಾ ರಾಮನಾಥನ್ರ ಹಿಂದೂಸ್ತಾನಿ ಕಛೇರಿಗೆ ಬೆಂಗಳೂರಿನ ವಿಶ್ವನಾಥ ನಾಕೋಡ್ ತಬಲಾ ಸಾಥ್ ನೀಡುವರು. ವಿದುಷಿ ಕಲಾ ರಾಮನಾಥನ್ ಕಛೇರಿ ಅ.29ರಂದು ರಾತ್ರಿ 10ರಿಂದ 11ರ ವರೆಗೆ, ವಿದುಷಿ ಪದ್ಮಾವತಿ ಸಾರನಾಥನ್ರ ಕಛೇರಿ ಡಿ.6ರಂದು ರಾತ್ರಿ 10ರಿಂದ 11ರ ವರೆಗೆ ದೇಶಾದ್ಯಂತ ಆಕಾಶವಾಣಿಯಲ್ಲಿ ಪ್ರಸಾರವಾಗಲಿದೆ. ಆಕಾಶವಾಣಿ ಸಂಗೀತ ಸಮ್ಮೇಳನ ಪ್ರಸಾರ ದೇಶಾದ್ಯಂತ ಅ.19ರಿಂದ ಡಿ.11ರ ವರೆಗೆ ಪ್ರತಿದಿನ ರಾತ್ರಿ 10ರಿಂದ 11ರ ವರೆಗೆ ಪ್ರಸಾರವಾಗಲಿದೆ ಎಂದರು.