28ರವರೆಗೆ ಉಚಿತ ತಪಾಸಣೆ
ಮಂಗಳೂರು: ವಿಶ್ವ ಹೃದಯ ದಿನದ ಪ್ರಯುಕ್ತ ದೇರಳಕಟ್ಟೆ ಯೇನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸೆ. 23 ರಿಂದ 28ರವರೆಗೆ ಸಂಪೂರ್ಣ ಹೃದಯ ತಪಾಸಣೆ ಮತ್ತು ಆರೋಗ್ಯ ತಪಾಸಣೆ ನಡೆಯಲಿದೆ. ಶಿಬಿರವು ಬೆಳಗ್ಗೆ 9 ರಿಂದ ಮಧ್ಯಾಹ್ನ 2ರವರೆಗೆ ನಡೆಯಲಿದ್ದು, ಆಸಕ್ತರು ಹೆಚ್ಚಿನ ಮಾಹಿತಿಗೆ 0824-2204668 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಇಂದಿನಿಂದ ರಾಷ್ಟ್ರೀಯ ವಿಚಾರ ಸಂಕಿರಣ
ಮಂಗಳೂರು: ಸ್ಥಳೀಯ ಆಡಳಿತ ಅನುಷ್ಠಾನ ಮತ್ತು ಸಮರ್ಥನೀಯ ಅಭಿವೃದ್ಧಿ ಕುರಿತ 2 ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಸೆ.26ರಿಂದ ಕುದ್ರೋಳಿ ಗೋಕರ್ಣನಾಥೇಶ್ವರ ಕಾಲೇಜ್‌ನಲ್ಲಿ ನಡೆಯಲಿದೆ. ಆರೋಗ್ಯ ಸಚಿವ ಯು.ಟಿ.ಖಾದರ್ ಉದ್ಘಾಟಿಸುವರು. ದೀನಬಂಧು ಟ್ರಸ್ಟ್ ಕಾರ್ಯದರ್ಶಿ ಪ್ರೊ. ಜಯದೇವ ದಿಕ್ಸೂಚಿ ಭಾಷಣ ಮಾಡುವರು ಎಂದು ಕಾಲೇಜ್ ಪ್ರಾಂಶುಪಾಲ ಡಾ.ಗಂಗಾಧರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಬೆಂಗಳೂರು ದಯಾನಂದ ಸಾಗರ ಸಂಸ್ಥೆಯ ಡಾ.ಎಚ್.ಶಂಕರನಾರಾಯಣ, ಡಾ.ಬಿ.ಎಂ.ಕುಮಾರಸ್ವಾಮಿ, ಡಾ.ಕೃಷ್ಣ ಕೊತಾ., ಎಸ್‌ಡಿಎಂ ಕುಲಸಚಿವ ಡಾ.ಉದಯಚಂದ್ರ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಡಾ.ಎಚ್.ಲಕ್ಷ್ಮೀಕಾಂತ ಭಾಗವಹಿಸುವರು.
ಸರಳ ಜ್ಯೋತಿಷ್ಯ ಸಾಫ್ಟ್‌ವೇರ್
ಮಂಗಳೂರು: ಜ್ಯೋತಿಷ್ಯ ವಿದ್ವಾಂಸರಿಂದ ಜನಸಾಮಾನ್ಯರಿಗೂ ಸುಲಭ ರೀತಿಯಲ್ಲಿ ತಿಳಿಯುವ ವಿಂಡೋಸ್, ಆಂಡ್ರೈಡ್ ಅಪ್ಲಿಕೇಶನ್ ಮೂಲಕ ಮೊಬೈಲ್, ಟ್ಯಾಬ್‌ನಲ್ಲಿ 'ಅಸ್ಟ್ರೋಲೈಟ್ ವೇದಾಂಗ ಜೋತಿಷ್ಯ ಸಾಫ್ಟ್‌ವೇರ್' ಲಭ್ಯವಿದೆ. ಮಂಗಳೂರು ಆಟೋಮೇಶನ್ ಇನ್‌ಫೋ ಸೊಲ್ಯುಷನ್ಸ್ ತಯಾರಿಸಿದ ಈ ಸಾಫ್ಟ್‌ವೇರ್ ಇದು ಶಾಸ್ತ್ರೀಯವಾಗಿ ನಿರ್ಮಾಣಗೊಂಡಿದೆ. ವಿದ್ಯಾರ್ಥಿಗಳಿಗೆ, ವಿದ್ವಾಂಸರಿಗೆ ಹೆಚ್ಚಿನ ಸಂಶೋಧನೆ, ಅಧ್ಯಯನ ನಡೆಸಲು ಈ ಸಾಫ್ಟ್‌ವೇರ್ ಸಹಕಾರಿ. ಜಾತಕದಲ್ಲಿ ನಿತ್ಯ ಪಂಚಾಂಗ, ಷಡ್ಬಲ, ಏಳು ರೀತಿಯ ದಶಾಪದ್ಧತಿಗಳು, ಯೋಗಗಳು, ವ್ಯಕ್ತಿಯ ವಯಸ್ಸು ಇತ್ಯಾದಿ ವಿಚಾರಗಳು ಸರಳ ಶೈಲಿಯಲ್ಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಚಂದ್ರಶೇಖರ್ ಭಟ್-09447490737 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಇಂದು ಪ್ರಬಂಧ ಸ್ಪರ್ಧೆ
ಮಂಗಳೂರು: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಜಿಲ್ಲಾಡಳಿತ ವತಿಯಿಂದ ಸೆ. 26 ಹಂಪನಕಟ್ಟೆ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಕಾಲೇಜಿ ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಭಾಷಣ ಸ್ಪರ್ಧೆ ನಡೆಯಲಿದೆ. 'ಪ್ರವಾಸೋದ್ಯಮ ಹಾಗೂ ಜಲ ನಮ್ಮ ಸಾಮಾನ್ಯ ಭವಿಷ್ಯವನ್ನು ರಕ್ಷಣೆ ಮಾಡುತ್ತದೆ' ಎಂಬ ವಿಷಯದಲ್ಲಿ ಸ್ಪರ್ಧೆಗಳು ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಪ್ರವಾಸೋದ್ಯಮ ಉಪನ್ಯಾಸಕ ಶ್ರೀರಾಜ್-9964491664 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಮೃತ ಶರೀರ ಗುರುತು ಪತ್ತೆಗೆ ಮನವಿ
ಮಂಗಳೂರು: ವೆನ್‌ಲಾಕ್ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಅನಾಥ ಮೃತದೇಹಗಳಿದ್ದು, ಸಂಬಂಧಪಟ್ಟ ವಾರಸುದಾರರು 3 ದಿನದೊಳಗೆ ಸಂಪರ್ಕಿಸಿ ಶವಗಳನ್ನು ವಿಲೇವಾರಿಗೊಳಿಸುವಂತೆ ಆಸ್ಪತ್ರೆಯ ವೈದ್ಯಾಧಿಕಾರಿ ಹೇಳಿದ್ದಾರೆ. ಬೊಕ್ಕಪಟ್ಣದ ಮಾದಮ್ಮ(36) ಎಂಬವರು ಸೆ. 16 ರಂದು ಆಸ್ಪತ್ರೆಯಲ್ಲಿ ಒಳರೋಗಿ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಫರಂಗಿಪೇಟೆ ಕೊಂಪಜಾಲು ನಿವಾಸಿ ರಮೇಶ್(68) ಚಿಕಿತ್ಸೆ ಫಲಿಸದೆ 22ರಂದು ಮರಣ ಹೊಂದಿದ್ದಾರೆ.
ಇಂದಿನಿಂದ ಉಚಿತ ತಪಾಸಣೆ
ಮಂಗಳೂರು: ಅತ್ತಾವರ ಕೆಎಂಸಿ ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ವಿಭಾಗದ ವತಿಯಿಂದ ಸೆ. 26 ರಿಂದ 28ರವರೆಗೆ ಆಸ್ಪತ್ರೆಯ ಆವರಣದಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ. ಶಿಬಿರವು ಬೆಳಗ್ಗೆ 9 ರಿಂದ ಮಧ್ಯಾಹ್ನ 12.30ರವರೆಗೆ ನಡೆಯಲಿದೆ. ಶಿಬಿರದಲ್ಲಿ ಹೊಟ್ಟೆನೋವು, ಥೈರಾಯ್ಡ್ ಊತ, ಅಂಡವಾಯು, ಮೂಲವ್ಯಾಧಿ, ಪಿತ್ತಕಲ್ಲು ಇತ್ಯಾದಿಗಳ ಕುರಿತು ತಪಾಸಣೆ ನಡೆಸಲಾಗುವುದು. ಶೇ. 20 ರಿಯಾಯಿತಿ ದರದಲ್ಲಿ ರೇಡಿಯಾಲಾಜಿ, ಲ್ಯಾಬ್ ಪರೀಕ್ಷೆಯಲ್ಲಿ ಶೇ. 10 ರಿಯಾಯಿತಿ ದರ ನೀಡಲಾಗುವುದು ಎಂದು ವೈದ್ಯಕೀಯ ಮೇಲ್ವಿಚಾರಕ ಡಾ. ಮಧುಸೂದನ್ ಉಪಾಧ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದಿನಿಂದ ದೂರು ಸ್ವೀಕಾರ
ಮಂಗಳೂರು: ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರು ಜಿಲ್ಲೆಯ ತಾಲೂಕುಗಳಿಗೆ ಭೇಟಿ ನೀಡಲಿದ್ದು, ಸಾರ್ವಜನಿಕರು ಸರ್ಕಾರಿ ಕಚೇರಿಗಳಲ್ಲಿ, ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ದೂರು ನೀಡಬಹುದಾಗಿದೆ. ಸೆ. 26 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1ರವರೆಗೆ ಮೂಡುಬಿದಿರೆಯ ಸರ್ಕಾರಿ ಅತಿಥಿಗೃಹ, 27ರಂದು ಮಧ್ಯಾಹ್ನ 2.30 ರಿಂದ 4.30ರವರೆಗೆ ಪುತ್ತೂರು ಸರ್ಕಾರಿ ಅತಿಥಿಗೃಹಗಳಿಗೆ ಭೇಟಿ ನೀಡುವರು. ಮಾಹಿತಿಗಾಗಿ ಪೊಲೀಸ್ ಅಧೀಕ್ಷಕರು 0824-2429197 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಎಂಡೋಸಲ್ಫಾನ್ ನಿಷೇಧ
ಮಂಗಳೂರು: ರಾಜ್ಯದಲ್ಲಿ ಎಂಡೋಸಲ್ಫಾನ್ ಕೀಟನಾಶಕ ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘಿಸಿ ಮಾರಾಟಗಾರರು, ವಿತರಕರು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ. ಮಾರಾಟಗಾರರು, ವಿತರಕರು ಈ ನಿಷೇಧಿತ ಕೀಟನಾಶಕ, ಕೀಟನಾಶಕವಿರುವ ಯಾವುದೇ ಬ್ರಾಂಡಿನ ಕ್ರಿಮಿನಾಶಕವನ್ನು ಮಾರಾಟ ಮಾಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಯಾವುದೇ ಮಾರಾಟಗಾರರು ವಿತರಣೆ ಮಾಡುವುದನ್ನು ರೈತರ, ಸಾರ್ವಜನಿಕರ ಗಮನಕ್ಕೆ ಬಂದರೆ ಕೃಷಿ ಇಲಾಖೆ ಕಚೇರಿಗೆ ಮಾಹಿತಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.
ಚುನಾವಣೆ ಪ್ರಚಾರಾಂದೋಲನ
ಮಂಗಳೂರು: ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ 2014 ಜ.1 ರಂದು 18 ವರ್ಷ ತುಂಬುವ ಎಲ್ಲಾ ಯುವಜನಾಂಗದವರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವ ಸಲುವಾಗಿ ಪ್ರಚಾರಾಂದೋಲನ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಎನ್. ಪ್ರಕಾಶ್ ಹೇಳಿದ್ದಾರೆ. ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸ್ವೀಪ್ ಕುರಿತ ಸಭೆಯಲ್ಲಿ ಮಾತನಾಡಿದರು. ಈ ಪ್ರಚಾರ ಕಾರ್ಯಕ್ರಮದಲ್ಲಿ ಯುವ ಸಂಘಟನೆಗಳು, ನೆಹರು ಯುವ ಕೇಂದ್ರ, ಹಾಗೂ ಶಿಕ್ಷಣ ಇಲಾಖೆ ಭಾಗಿಯಾಗಿ ಸ್ವೀಪ್ ಕಾರ್ಯಕ್ರಮ ಯಶಸ್ವಿಗೊಳಿಸಲು ಕರೆ ನೀಡಿದರು. ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ತುಳಸಿ ಮದ್ದಿನೇನಿ, ಅಪರ ಜಿಲ್ಲಾಧಿಕಾರಿ ದಯಾನಂದ್ ಇದ್ದರು.
ಕಾಟಾಚಾರಕ್ಕೆ ನಡೆದ ಖಾತ್ರಿ ವಿಶೇಷ ಸಭೆ
ಮೂಲ್ಕಿ: ಕಿಲ್ಪಾಡಿಯ ಗ್ರಾಪಂ ಸಭಾಭವನದಲ್ಲಿ ಜರುಗಿದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಪ್ರಸ್ತುತ ಸಾಲಿನ ಯೋಜನೆಯ ಕುರಿತು ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಅಧಿಕಾರಿಗಳು ಸೇರಿ ಕೇವಲ 22 ಮಂದಿ ಭಾಗವಹಿಸಿದ್ದು ವಿಶೇಷ ಗ್ರಾಮ ಸಭೆಯು ಕೇವಲ ಕಾಟಾಚಾರಕ್ಕೆ ನಡೆದಿದೆ. ಅಧ್ಯಕ್ಷತೆಯನ್ನು ಕಿಲ್ಪಾಡಿ ಪಂಚಾಯಿತಿ ಅಧ್ಯಕ್ಷೆ ಶಾರದಾ ವಸಂತ್ ವಹಿಸಿದ್ದು ಹೆಚ್ಚಿನ ಸದಸ್ಯರು ಸಭೆಯಲ್ಲಿ ಗೈರು ಹಾಜರಾಗಿದ್ದರು. ಬೆರಳೆಣಿಕೆಯ ಅಧಿಕಾರಿಗಳು ಭಾಗವಹಿಸಿದ್ದು ಕೇವಲ 10 ಮಂದಿ ಗ್ರಾಮಸ್ಥರು ಮಾತ್ರ ಸಭೆಯಲ್ಲಿ ಭಾಗವಹಿಸಿದ್ದರು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬರುವ ಮಳೆ ಕೊಯ್ಲು, ಜಲ ಸಂರಕ್ಷಣೆ ಮಾಹಿತಿ ನೀಡಲಾಯಿತು. ತಾಪಂ ಸದಸ್ಯೆ ವನಿತಾ ಅಮೀನ್,ಪಂಚಾಯಿತಿ ಪಿಡಿಒ ಶೋಭಾ ಇದ್ದರು.