ಕಾರ್ತಿಕೇಯ, ಯಶವಂತ್ ಜಪಾನ್ಗೆ
ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯ ಮತ್ತು ಜಪಾನ್ನ ರಿಟ್ಸುಮೈಕನ್ ವಿಶ್ವವಿದ್ಯಾನಿಲಯದ ಉನ್ನತ ಶಿಕ್ಷಣಕ್ಕೆ ಸಂಬಂಧಪಟ್ಟ ಒಡಂಬಡಿಕೆಯ ಪ್ರಥಮ ಹಂತವಾಗಿ ಸಂಸ್ಥೆಯ ಮೆಕ್ಯಾನಿಕಲ್ ಹಾಗೂ ಸಿವಿಲ್ ಎಂಜಿನಿಯರಿಂಗ್ ವಿಭಾಗಗಳ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಕಾರ್ತಿಕೇಯ ಕಾಮತ್ ಬಿ. ಮತ್ತು ಯಶವಂತ ಎಚ್. ಅವರು ಉನ್ನತ ತಾಂತ್ರಿಕ ಅಧ್ಯಯನಕ್ಕಾಗಿ ಸೆ. 30 ರಂದು ಆರು ತಿಂಗಳ ಅವಧಿಗೆ ಜಪಾನ್ಗೆ ತೆರಳಲಿದ್ದಾರೆ.
ಕಾರ್ತಿಕೇಯ ಇವರು ಅಲ್ಲಿನ ಪ್ರತಿಷ್ಠಿತ ಸಂಶೋಧಕರಾದ ಡಾ. ಸಂಗ್ ಹೊ ಹೈನ್ ಅವರ ಮಾರ್ಗದರ್ಶನದಲ್ಲಿ ಮನುಕುಲಕ್ಕೆ ಸಂಬಂಧಿಸಿದ ರೊಬೊಟ್ ವಿಷಯದಲ್ಲಿಯೂ ಹಾಗೂ ಯಶವಂತ ಎಚ್. ಅವರು ನುರಿತ ತಂತ್ರಜ್ಞರಾದ ಪ್ರೊ. ಯಶುಹಿಡೆ ಮೊಚಿಡಾ ಅವರ ಸಹಯೋಗದೊಂದಿಗೆ ಅತ್ಯಾಧುನಿಕ ಕಟ್ಟಡ ನಿರ್ಮಾಣ ಪ್ರಕ್ರಿಯೆ ಹಾಗೂ ನಿರ್ವಹಣೆ ಕ್ಷೇತ್ರದಲ್ಲಿಯೂ ತಮ್ಮ ಸಂಶೋಧನೆಯನ್ನು ಕೈಗೊಳ್ಳಲಿದ್ದಾರೆ. ಈ ಕಾರ್ಯಕ್ರಮವನ್ನು ನಿಟ್ಟೆ ವಿದ್ಯಾಸಂಸ್ಥೆಯು ಪ್ರಾಯೋಜಿಸಲಿದ್ದು, ಎರಡೂ ದೇಶಗಳ ಕಲಿಕಾ ಅನುಭವ ಹಾಗೂ ಸಂಶೋಧನೆಯ ಅಂಶಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದರ ಜೊತೆಗೆ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಧೋರಣಾತ್ಮಕ ಬದಲಾವಣೆಗಳನ್ನು ಮಾಡುವುದು ಈ ಭೇಟಿಯ ಉದ್ದೇಶ ಎಂದು ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೋಣ್ಕರರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.