ಧರ್ಮಸ್ಥಳ: ರಾಮಕಥೆ ನಿರೂಪಣೆಗೆ ಸಂಭ್ರಮದ ಚಾಲನೆ
ಬೆಳ್ತಂಗಡಿ: ದೀರ್ಘಾಯಸ್ಸು, ಮನುಷ್ಯರನ್ನು ಬಿಟ್ಟು ಬೇರೆ ಯಾರಿಂದಲೂ ಮರಣ ಉಂಟಾಗಬಾರದು ಎಂಬ ವರ ಹಾಗೂ ಚಂದ್ರಹಾಸ ಖಡ್ಗವನ್ನು ಸಾಂಬಶಿವ ಲಂಕಾಧಿಪತಿ ರಾವಣನಿಗೆ ನೀಡುವುದರ ಇತಿಹಾಸದೊಂದಿಗೆ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಧರ್ಮಸ್ಥಳದಲ್ಲಿ ಶ್ರೀ ರಾಮಾಯಣ ಮಹಾಕಾವ್ಯದ ನಿರೂಪಣೆಗೆ ಆರಂಭವನ್ನಿತ್ತರು.
ಭಾರತೀಯ ಸಂಸ್ಕೃತಿಯು ಚಿರಪುರಾತನವೂ ನಿತ್ಯನೂತನವೂ ಆದ ಮಹಾನ್ ಸಂಸ್ಕೃತಿ, ಈ ಸಂಸ್ಕೃತಿಯನ್ನೂ ಇದಕ್ಕೆ ತಳಹದಿಯಾದ ಮೌಲ್ಯಗಳನ್ನು ವೇದ- ಇತಿಹಾಸ- ಪುರಾಣಗಳೂ, ಮಹಾಕಾವ್ಯಗಳು ಕಥೆಗಳ ಮೂಲಕವಾಗಿಯೂ, ನಿದರ್ಶನಗಳ ಮೂಲಕವಾಗಿಯೂ ಸಾರಿಕೊಂಡು ಬಂದಿವೆ. ಮನುಷ್ಯನು ವೈಯಕ್ತಿಕವಾಗಿಯೂ ಸಮಾಜ ಜೀವಿಯಾಗಿಯೂ ಬೆಳೆಸಿಕೊಳ್ಳಬೇಕಾದ ಎಲ್ಲಾ ಸದ್ಗುಣಗಳ ನಿರೂಪಣೆ ರಾಮಾಯಣ ಮಹಾಕೃತಿಯಲ್ಲಿದೆ. ಇದನ್ನು ಜನಮಾನಸಕ್ಕೆ ಮುಟ್ಟಿಸಿ ಸುಂದರ, ಸ್ವಸ್ಥ ಸಮಾಜದ ನಿರ್ಮಾಣವಾಗಬೇಕು ಎಂಬ ದೃಷ್ಟಿಯಿಂದ ರಾಮಕಥೆಯ ಪರಂಪರೆಯನ್ನು ಶ್ರೀಗಳು ಆರಂಭಿಸಿದ್ದಾರೆ. ಇದಕ್ಕೆ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಸಾಥ್ ನೀಡಿದ್ದಾರೆ.
ರಾಮ, ಸೀತೆಯರ ಜನನಕ್ಕಿಂತ ಪೂರ್ವದಲ್ಲಿ ರಾವಣ ಕೈಲಾಸ ಪರ್ವತವನ್ನು ಎತ್ತುವ ಸನ್ನಿವೇಶ ಹೇಗಾಯಿತು ಎಂಬುದನ್ನು ರಾಮಕಥಾ ತಂಡ ರೂಪಕದ ಮೂಲಕವೂ ಪ್ರಸ್ತುತ ಪಡಿಸಿತು.
ಸ್ವಾಮೀಜಿ ಹೇಳಿದ್ದು...
ಶಿವಕ್ಷೇತ್ರದಲ್ಲಿ ರಾಮ ಕಥೆಯ ಆರಂಭ. ಎತ್ತರಕ್ಕಿರುವವನು ಜನರ ಹತ್ತಿರಕ್ಕಿರಬೇಕು ಎನ್ನುವ ಸಂದೇಶ ಶಿವನದ್ದು. ಧರ್ಮಸ್ಥಳದಲ್ಲಿ ಇದು ಸಾಕಾರಗೊಂಡಿದೆ.
ಶಿವನ ಆವಾಸ ಸ್ಥಾನ ಭಾರತದ ಗಡಿಯಿಂದ ಹೊರಗಿದೆ. ಇದು ಮತ್ತೆ ಗಡಿಯೊಳಗೆ ಬರಲಿ.
ಚೀನ ಕಮ್ಯೂನಿಸ್ಟ್ ರಾಷ್ಟ್ರವಾಗಿದ್ದರೂ ಕೈಲಾಸದ ಮೇಲೆ ವಿಮಾನ ಹಾರಿಸುವುದಿಲ್ಲ.
ಮಾಡಬೇಕಾದ್ದನ್ನು ಮಾಡಿದರೆ ಆಗಬೇಕಾದ್ದು ಒಳ್ಳೆಯದಾಗುತ್ತದೆ. ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆಗುತ್ತದೆ. ಮಾಡಬೇಕಾದನ್ನು ಮಾಡದಿದ್ದರೆ ಆಗಬೇಕಾದ್ದು ಆಗುವುದಿಲ್ಲ.
ಮೇರಾ ಹೋಗಿ ತೇರಾ ಎಂದಾಗಲೇ ಉದ್ಧಾರ ಸಾಧ್ಯ. ಧರ್ಮಕ್ಕೆ ಕೈ ಕಾಲು ಬಂದರೆ ಅದುವೇ ಶ್ರೀರಾಮ
ಮಾಡಿದ್ದು ಮಾಡಿದಂತೆ ಇರುತ್ತಿದದ್ದು ಕೃತಯುಗದಲ್ಲಿ. ಆದರೆ, ಇದಕ್ಕೆ ವಿರುದ್ಧ ಕಲಿಯುಗ. ಈ ಯುಗದಲ್ಲಿ ಯಾವುದು ಹೇಗಿರಬೇಕೋ ಹಾಗಿರುವುದಿಲ್ಲ. ಸಂತರಿಗಿಂತ ಕಪಟ ಸಂತರು ಹೆಚ್ಚಾಗುತ್ತಾರೆ. ಸಹವಾಸ ಮಾಡಿದರೆ ನೀಚರದ್ದೇ ಆಗಿರುತ್ತೆ. ಹೀಗಿರುವಾಗ ಯೋಗ್ಯ ಆಶ್ರಯವನ್ನರಸಿ ಹೋಗುತ್ತಿದ್ದ ಧರ್ಮಕ್ಕೆ ನೆಲೆಸಿಕ್ಕಿದ್ದು ಧರ್ಮಸ್ಥಳದಲ್ಲಿ.