ನೇತ್ರಾವತಿ ತಿರುವು ವಿರೋಧಿ ಹೋರಾಟ ವಿಸ್ತರಣೆ ನಿರ್ಧಾರ
ಉಪ್ಪಿನಂಗಡಿ: ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿಸಿ ಹೋರಾಟ ನಡೆಸುತ್ತಿರುವ ಉಪ್ಪಿನಂಗಡಿಯ ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿ ಹೋರಾಟ ಸಮಿತಿ ತಮ್ಮ ಹೋರಾಟವನ್ನು ಜಿಲ್ಲೆಯ ವಿವಿಧ ಸಂಘಟನೆಗಳ ಸಹಕಾರ ಪಡೆದು ವಿಸ್ತರಿಸುವ ನಿರ್ಧಾರ ಕೈಗೊಂಡಿದ್ದು, ಜಿಲ್ಲಾದ್ಯಂತ ನಡೆವ ಹೋರಾಟದಲ್ಲಿ ತೊಡಗುವ ಬಗ್ಗೆ ನಿರ್ಣಯಿಸಲಾಯಿತು.
ಬುಧವಾರ, ಮಲೆನಾಡು ಉಳಿಸಿ ಹೋರಾಟ ಸಮಿತಿಯ ಮುಂದಾಳುಗಳಾದ ದಿನೇಶ್ ಹೊಳ್ಳ, ಕಿಶೋರ್ ಅವರನ್ನು ಒಳಗೊಂಡ ನಿಯೋಗದ ಜೊತೆ ಮಾತುಕತೆ ನಡೆಸಿದ ಡಾ. ನಿರಂಜನ್ ರೈ ನೇತೃತ್ವದ ಹೋರಾಟ ಸಮಿತಿಯ ಪದಾಧಿಕಾರಿಗಳು ಹೋರಾಟಕ್ಕೆ ತೀವ್ರ ಸ್ವರೂಪ ಒದಗಿಸುವ ಹಿನ್ನೆಲೆಯಲ್ಲಿ ವಿವಿಧ ಹಂತದ ಯೋಜನೆಗಳನ್ನು ರೂಪಿಸಲಾಯಿತು.
ಅಕ್ಟೋಬರ್‌ನಲ್ಲಿ ಹೋರಾಟ: ಉಪ್ಪಿನಂಗಡಿಯ ಕಟ್ಟಡ ಮತ್ತು ಇತರ ನಿರ್ಮಾಣಗಾರರ ಸಂಘದ ಆಶ್ರಯದಲ್ಲಿ ಅ.1ರಂದು ಉಪ್ಪಿನಂಗಡಿಯಲ್ಲಿ ನಡೆಸಲುದ್ದೇಶಿಸಿರುವ ನದಿ ತಿರುವು ಯೋಜನೆಯ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳುವುದು, ಅ.2 ರಂದು ಮಂಗಳೂರಿನಲ್ಲಿ ನಡೆಯುವ ಹೋರಾಟದಲ್ಲಿ ಪಾಲ್ಗೊಳ್ಳುವುದು, ಅ.9ರಂದು ಉಪ್ಪಿನಂಗಡಿಯಲ್ಲಿ ಶಾಸಕ ವಸಂತ ಬಂಗೇರ ನೇತೃತ್ವದಲ್ಲಿ ಸಭೆ ನಡೆಸುವ ಬಗ್ಗೆ ಚರ್ಚಿಸಲಾಯಿತು. ಮಲೆನಾಡು ಉಳಿಸಿ ಹೋರಾಟ ಸಮಿತಿಯ ಕಿಶೋರ್, ದಿನೇಶ್ ಹೊಳ್ಳ, ಹರೀಶ್ ಅಡ್ಯಾರು, ದಿನೇಶ್ ಕೊಡಿಯಾಲ್‌ಬೈಲ್, ಪವನ್ ಜೈನ್, ಉದಯ ಪಡಿಯಾರ್, ನದಿ ತಿರುವು ವಿರೋಧಿ ಹೋರಾಟ ಸಮಿತಿಯ ಜಯಂತ ಪುರೋಳಿ, ಕೈಲಾರ್ ರಾಜ್‌ಗೋಪಾಲ ಭಟ್, ಲೋಕೇಶ್ ಬತ್ತೋಡಿ, ಯು.ಟಿ.ಇರ್ಷಾದ್ ಮೊದಲಾದವರು ಭಾಗವಹಿಸಿದರು.