ಫೈನಾನ್ಸ್ ಉದ್ಯಮಿ ಅಪಹರಿಸಿ ಹಲ್ಲೆ; ದೂರು ದಾಖಲು
ಬಂಟ್ವಾಳ: ಕೇರಳ ಮೂಲದ ತಂಡವೊಂದು ವಿಟ್ಲದ ಫೈನಾನ್ಸ್ ಉದ್ಯಮಿಯೊಬ್ಬರನ್ನು ಅಪಹರಿಸಿ, ಹಲ್ಲೆ ನಡೆಸಿದ ಘಟನೆ ಸೋಮವಾರ ನಡೆದಿದ್ದು, ಈ ಬಗ್ಗೆ ಮಂಗಳವಾರ ರಾತ್ರಿ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಲ ಕಸಬಾ ಗ್ರಾಮದ ಕಾಂತಡ್ಕ ನಿವಾಸಿ ವಿಟ್ಲದಲ್ಲಿ ವಾಹನ ಫೈನಾನ್ಸ್ ವ್ಯವಹಾರ ನಡೆಸುತ್ತಿರುವ ಹಸೈನಾರ್(45) ಅಪಹರಿಲ್ಪಟ್ಟು ಹಲ್ಲೆಗೊಳಗಾದವರು.
ಸೋಮವಾರ ಸಂಜೆ ಹಸೈನಾರ್ ಅವರು ಮನೆಗೆ ತೆರಳುತ್ತಿದ್ದ ವೇಳೆ ಕಾಂತಡ್ಕ ತಿರುವಿನಲ್ಲಿ ಅವರ ಕಾರನ್ನು ಅಡ್ಡಗಟ್ಟಿದ ಕೇರಳದ ಆಸೀಪ್, ಇಸುಬು ಹಾಗೂ ಮತ್ತಿತರರಿದ್ದ ತಂಡ ಈ ಕೃತ್ಯ ಎಸಗಿದೆ ಎಂದು ಆರೋಪಿಸಲಾಗಿದೆ. ಹಸೈನಾರ್ ಅವರನ್ನು ಕೇರಳದ ಮಚ್ಚಂಬಳ ಎಂಬಲ್ಲಿಗೆ ಕರೆದುಕೊಂಡು ಹೋಗಿ ತಮಗೆ ಸೇರಬೇಕಾದ 10 ಲಕ್ಷ ನೀಡುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಹಸೈನಾರ್ ಅವರ ಕಾರು ವಶಪಡಿಸಿಕೊಂಡು ಖಾಲಿ ಚೆಕ್ ಹಾಗೂ ಸ್ಟಾಂಪ್ ಪೇಪರ್ಗೆ ಸಹಿ ಹಾಕಿಸಿಕೊಂಡು ಹಲ್ಲೆಗೈದು ವಾಪಸ್ ಕಳುಹಿಸಿದ್ದಾರೆ. ಈ ಬಗ್ಗೆ ಹಸೈನಾರ್ ವಿಟ್ಲ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಹಸೈನಾರ್ ಅವರ ಅಳಿಯ ಫಾರೂಕ್ ಮತ್ತು ಆರೋಪಿಗಳ ನಡುವಿನ ಫೈನಾನ್ಸ್ ವ್ಯವಹಾರವೇ ಈ ಘಟನೆಗೆ ಕಾರಣವೆನ್ನಲಾಗಿದೆ.