ಮೂವರು ವಿದ್ಯಾರ್ಥಿಗಳಿಗೆ ಎನ್ಟಿಎಸ್ಇ ಸ್ಕಾಲರ್ಶಿಪ್
ಮಂಗಳೂರು: ಕೇಂದ್ರ ಸರ್ಕಾರದ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಇಲಾಖೆ (ಎನ್ಟಿಎಸ್ಇ) ಕಳೆದ ಮೇನಲ್ಲಿ ನಡೆಸಿದ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ ಕುಂಟಿಕಾನ 'ಸೆಂಟರ್ ಫಾರ್ ಅಡ್ಸ್ಡ್ ಲರ್ನಿಂಗ್' ಸಂಸ್ಥೆಯ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಕೆನರಾ ಉರ್ವ ಶಾಲೆಯ ಆದರ್ಶ್ ಸೋಮಯಾಜಿ, ದಿಲ್ಲಿ ಪಬ್ಲಿಕ್ ಸ್ಕೂಲ್ನ ಪುಲ್ಕಿತ್ ಸರೀನಾ ಹಾಗೂ ಎನ್ಐಟಿಕೆ ಸುರತ್ಕಲ್ನ ಸ್ನೇಹಾ ಮಹಾಜನ್ಗೆ ಪ್ರಥಮ ಪಿಯುಸಿಯಿಂದ ಪಿಎಚ್ಡಿ ವರೆಗೆ ವಾರ್ಷಿಕ ತಲಾ ರು. 6 ಸಾವಿರದಂತೆ ವಿದ್ಯಾರ್ಥಿ ವೇತನ ದೊರಕಲಿದೆ ಎಂದು ಸಂಸ್ಥೆ ಪ್ರಾಂಶುಪಾಲ ಸೆವರಿನ್ ರೊಸಾರಿಯೊ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಥಮ ಹಂತದ ಪರೀಕ್ಷೆಯಲ್ಲಿ ಕರ್ನಾಟಕದಿಂದ ಒಟ್ಟು 50711 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದು, 223 ಮಂದಿ ದ್ವಿತೀಯ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಇವರಲ್ಲಿ ಮೂರು ಮಂದಿ ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದವರು. ಎನ್ಟಿಎಸ್ಇ ಪ್ರತಿ ವರ್ಷ 10ನೇ ತರಗತಿಯಲ್ಲಿ ಕಲಿಯುತ್ತಿರುವ ಸುಮಾರು 500 ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪ್ರತಿಭಾನ್ವೇಷಣೆ ಮೂಲಕ ಪ್ರತಿಭಾ ಪೋಷಣೆ ಮಾಡುತ್ತಿದೆ ಎಂದರು.