ಸಂಸ್ಕೃತಿ-ಮನರಂಜನೆ ವ್ಯತ್ಯಾಸ ತಿಳಿಯಿರಿ: ಡಾ.ಮೋಹನ ಆಳ್ವ
ಮಂಗಳೂರು: ಸಂಸ್ಕೃತಿಯಲ್ಲಿ ಮನರಂಜನೆ ಸಿಗಬಹುದು, ಹಾಗೆಂದು ಎಲ್ಲವೂ ಸಂಸ್ಕೃತಿ ಅಲ್ಲ. ಯುವಜನತೆ ಮನರಂಜನೆ ಮತ್ತು ಸಂಸ್ಕೃತಿ ನಡುವಿನ ವ್ಯತ್ಯಾಸ ತಿಳಿದಿರಬೇಕು ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ಡಾ.ಮೋಹನ ಆಳ್ವ ಹೇಳಿದ್ದಾರೆ.
ದೇರಳಕಟ್ಟೆ ಯೇನೆಪೋಯ ವಿಶ್ವವಿದ್ಯಾಲಯದಲ್ಲಿ ಬುಧವಾರ ದಕ್ಷಿಣ ಪ್ರಾಂತ್ಯ ಸಾಂಸ್ಕೃತಿಕ ಕೇಂದ್ರ ತಂಜಾವೂರು ಮತ್ತು ಕೇರಳ ಜಾನಪದ ಅಕಾಡೆಮಿ ಆಶ್ರಯದಲ್ಲಿ ನಡೆದ ಈಶಾನ್ಯ ಭಾರತದ ಸಾಂಸ್ಕೃತಿಕ ಉತ್ಸವದಲ್ಲಿ ಅವರು ಮಾತನಾಡಿದರು.
ಮೌಲ್ಯಾಧಾರಿತ ಶಿಕ್ಷಣ ಜತೆಗೆ ಸಾಂಸ್ಕೃತಿಕ ರಂಗದ ಸಾಥ್ ಕೂಡ ಇರಬೇಕು. ಈ ನಿಟ್ಟಿನಲ್ಲಿ ಯೇನೆಪೋಯ ವಿವಿ ಸಂಘಟಿಸಿದ ಕಾರ್ಯಕ್ರಮ ಶ್ಲಾಘನೀಯ ಎಂದರು.
ರಾಜ್ಯ ಯುವಜನ ಸೇವಾ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಉತ್ಸವ ಉದ್ಘಾಟಿಸಿ, ಮಿನಿ ಭಾರತ ಇಲ್ಲಿ ನಿರ್ಮಾಣವಾಗಿದ್ದು, ವಿವಿಧ ರಾಜ್ಯಗಳ ಸಾಂಸ್ಕೃತಿಕ ಸೊಗಡು ಅನಾವರಣಗೊಂಡಿದೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್, ಕೇರಳ ಜಾನಪದ ಅಕಾಡೆಮಿ ಅಧ್ಯಕ್ಷ ಪ್ರೊ.ಮಹಮ್ಮದ್ ಹಮೀದ್, ಕಾರ್ಯದರ್ಶಿ ಪ್ರದೀಪ್ ಕುಮಾರ್, ಯೇನೆಪೋಯ ವಿವಿ ಉಪಕುಲಪತಿ ಪ್ರೊ.ಚಂದ್ರಮೋಹನ, ರಿಜಿಸ್ಟ್ರಾರ್ ಡಾ.ಸಿ.ವಿ.ರಘುವೀರ್, ಪರೀಕ್ಷಾ ನಿಯಂತ್ರಕ ಪ್ರೊ.ಜಯರಾಜನ್ ಇದ್ದರು.
ವಿವಿ ಸಂಘಟನಾ ಸಮಿತಿ ಅಧ್ಯಕ್ಷ ಪ್ರೊ.ಪಿ.ಸಿ.ಎಂ.ಕುಂಞ ಅಧ್ಯಕ್ಷತೆ ವಹಿಸಿದ್ದರು. ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರಾ ರಾಜ್ಯಗಳ 150ಕ್ಕೂ ಅಧಿಕ ಕಲಾವಿದರು ಪ್ರದರ್ಶನ ನೀಡಿದರು.