ಕಾರ್ನಾಡು: ಮನೆಯಲ್ಲಿ ಪ್ರಾರ್ಥನಾ ಕೂಟ; ಮೂಲ್ಕಿ ಠಾಣೆಯಲ್ಲಿ ವಿಚಾರಣೆ
ಮೂಲ್ಕಿ: ಕಾರ್ನಾಡಿನ ಹರಿಹರ ಕ್ಷೇತ್ರದ ಸಮೀಪವಿರುವ ಸುಖಾನಂದ ನಗರ ಬಡಾವಣೆಯಲ್ಲಿ ಕ್ರೈಸ್ತ ಸಮುದಾಯದ ವ್ಯಕಿಯೊಬ್ಬರು ತಮ್ಮ ಮನೆಯಲ್ಲಿ ಪ್ರತಿ ರವಿವಾರ ಅನಧಿಕೃತವಾಗಿ ಪ್ರಾರ್ಥನಾ ಕೇಂದ್ರ ನಡೆಸುತ್ತಿದ್ದಾರೆ ಎಂಬ ಈ ನಿಟ್ಟಿನಲ್ಲಿ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಮೂಲ್ಕಿ ಪೊಲೀಸ್ ಠಾಣಾಧಿಕಾರಿ ಬಶೀರ್ ಅಹಮ್ಮದ್ ಮನೆ ಮಾಲೀಕರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಅಸುಪಾಸಿನ ಉರಿನಿಂದ ಸೇರಿದಂತೆ ಸುಮಾರು ಐವತ್ತಕ್ಕೂ ಮಿಕ್ಕಿ ಮಂದಿ ಪ್ರಾರ್ಥನೆಯಲ್ಲಿ ಭಾಗವಹಿಸುತ್ತಿದ್ದು ಇದನ್ನು ತಡೆಯುವಂತೆ ಸ್ಥಳೀಯರು ಮೂಲ್ಕಿ ಪೊಲೀಸ್ ಠಾಣೆಗೆ ಮೌಖಿಕವಾಗಿ ದೂರು ನೀಡಿದ್ದಾರೆ. ಈ ಬಗ್ಗೆ ಉತ್ತರಿಸಿರುವ ಮನೆಯ ಮಾಲೀಕರು, ತಾನು ವಿದೇಶದಲ್ಲಿದ್ದು ಹಿಂದಿರುಗಿ ಬಂದಿದ್ದು ಸ್ವಯಂ ಪ್ರೇರಣೆಯಿಂದ ಪ್ರಾರ್ಥನೆ ನಡೆಸುತ್ತಿದ್ದೇನೆ. ಯಾರನ್ನು ಒತ್ತಾಯಿಸಿಲ್ಲ ಎಂದು ತಿಳಿಸಿದ್ದಾರೆ.
ಹತ್ತಿರದಲ್ಲಿ ಚರ್ಚ್ ಇದ್ದು ಇಲ್ಲಿ ಪ್ರಾರ್ಥನೆ ನಡೆಸುವ ಅಗತ್ಯ ಇಲ್ಲ ಎಂದು ಸ್ಥಳೀಯರು ತಿಳಿಸಿದ್ದು ಆನಧಿಕೃತವಾಗಿ ಪ್ರಾರ್ಥನೆ ನಡೆಸುವುದನ್ನು ನಿಲ್ಲಿಸುವಂತೆ ತಿಳಿಸಲಾಗಿದೆ. ಅದಕ್ಕೆ ಅವರು ಇನ್ನು ಮುಂದೆ ಮನೆಯಲ್ಲಿ ಪ್ರಾರ್ಥನೆ ನಡೆಸುವುದಿಲ್ಲವೆಂದು ಠಾಣೆಯಲ್ಲಿ ಒಪ್ಪಿಕೊಂಡಿದ್ದು ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಲಾಗಿದೆ.