'ದೋಣಿಗೆ ಸಬ್ಸಿಡಿ ಸೀಮೆಎಣ್ಣೆಯೇ ಕೊಟ್ಟಿಲ್ಲ'
ಮಂಗಳೂರು: ಕಾಂಗ್ರೆಸ್ ಸರ್ಕಾರ ಪ್ರತಿ ತಿಂಗಳು 400 ಲೀ.ಸೀಮೆ ಎಣ್ಣೆ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಮೀನುಗಾರಿಕೆ ಆರಂಭವಾಗಿ ಒಂದುವರೆ ತಿಂಗಳು ಕಳೆದರೂ ಹಿಂದೆ ಸಿಗುತ್ತಿದ್ದ 15 ಲೀ. ಸೀಮೆಎಣ್ಣೆಯೂ ಸಿಗುತ್ತಿಲ್ಲ ಎಂದು ಜಿಲ್ಲಾ ಗಿಲ್ನೆಟ್ ಮೀನುಗಾರರ ಸಂಘ ಆರೋಪಿಸಿದೆ. ಸೀಮೆ ಎಣ್ಣೆ ಇಲ್ಲದೆ ಮೀನುಗಾರಿಕೆ ಸ್ಥಗಿತಗೊಂಡು ಲಕ್ಷಾಂತರ ರುಪಾಯಿ ಸಾಲ ಮತ್ತು ಬಡ್ಡಿ ಪಾವತಿಸಲು ಕಷ್ಟವಾಗಿದೆ. ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದ್ದು ಸರ್ಕಾರ ತಕ್ಷಣ ಸೀಮೆಎಣ್ಣೆ ಬಿಡುಗಡೆ ಮಾಡಬೇಕು ಎಂದು ಮೀನುಗಾರರ ಸಂಘ ಪ್ರಧಾನ ಕಾರ್ಯದರ್ಶಿ ಬಿ.ಎ.ಬಶೀರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಈ ವರ್ಷ ಪರವಾನಗಿ ನವೀಕರಣಕ್ಕೆ ಅರ್ಜಿ ನೀಡಿದ್ದು, 45 ದಿನ ಕಳೆದರೂ ಪರ್ಮಿಟ್ ಕೂಡಾ ನೀಡಿಲ್ಲ. ಎಂಜಿನ್ಗಳನ್ನು ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿಗಳು ಎಂದಿನಂತೆಯೇ ಪರಿಶೀಲನೆ ನಡೆಸಿದ್ದಾರೆ. ಸೀಮೆ ಎಣ್ಣೆ ಮಾತ್ರ ನೀಡಿಲ್ಲ. ಸರ್ಕಾರ ಸ್ಪಂದಿಸದೆ ಇದ್ದಲ್ಲಿ, ಕರಾವಳಿಯಾದ್ಯಂತ ಗಿಲ್ನೆಟ್ ಮತ್ತು ನಾಡದೋಣಿ ಮೀನುಗಾರರು ಹೋರಾಟ ನಡೆಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಅಲಿ ಹಸನ್, ಗೌರವಾಧ್ಯಕ್ಷ ಸತೀಶ್ ಕೋಟ್ಯಾನ್ ಇದ್ದರು