ಉತ್ತಮ ಅಭ್ಯರ್ಥಿಗೆ ಮತದ ಮಾತು ಕೊಡಿ
ಮಂಗಳೂರು: ದೇಶದ ಏಕತೆ, ಸಮಗ್ರತೆ ಹಾಗೂ ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಉತ್ತಮ ಅಭ್ಯರ್ಥಿಗಳನ್ನು ಆರಿಸಿ, ಈ ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡಿ ಎಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಯುವ ಮತದಾರರಿಗೆ ಕರೆ ನೀಡಿದ್ದಾರೆ.
ದ.ಕ. ಜಿಲ್ಲಾಡಳಿತ ವತಿಯಿಂದ ನಗರದ ಟಿಎಂಎ ಪೈ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ಮಂಗಳವಾರ ಮತದಾನ ಜಾಗೃತಿ ಕುರಿತು ಯುವ ಮತದಾರರನ್ನುದ್ದೇಶಿ ಡಾ.ಕಲಾಂ ಪಾಠ ಮಾಡಿದರು. ಭಾಷಣದ ಜತೆ ಸಂವಾದ ನಡೆಸಿದರು. ಮತದಾನ ನಡೆಸುವಂತೆ ಯುವ ಮತದಾರರಿಗೆ ಪ್ರೇರೇಪಣೆ ನೀಡಿದರು.
ಹೇಳಿದ್ದಿಷ್ಟು: 'ಅರ್ಹ ಅಭ್ಯರ್ಥಿಯನ್ನೇ ಆಯ್ಕೆ ಮಾಡುತ್ತೇವೆ ಎಂದು ನೀವು ನನಗೆ ಮಾತು ಕೊಡಿ, ನೀವು ಮಾತ್ರವಲ್ಲ ನಿಮ್ಮ ಹೆತ್ತವರು, ಗುರುಗಳು, ಅಲ್ಲದೆ ಇತರೆ 10 ಸ್ನೇಹಿತರಿಗೂ ಮತದಾನ ಮಾಡುವಂತೆ ಪ್ರೇರೇಪಿಸುತ್ತೇನೆ. ಹಾಗಾಗಿ ನಾನು, ಮುಕ್ತವಾಗಿ ನ್ಯಾಯಸಮ್ಮತವಾಗಿ ಮತದಾನ ಮಾಡುತ್ತೇನೆ. ನನ್ನ ರಾಷ್ಟ್ರದ ಉಳಿವಿಗೆ ಉತ್ತಮ ಆಡಳಿತಕ್ಕೆ ಮತದಾನ ಮಾಡುತ್ತೇನೆ' ಎಂದು ಯುವ ಮತದಾರರಲ್ಲಿ ಪ್ರತಿಜ್ಞೆ ಮಾಡಿಸಿದರು.
ಮತದಾನ ಮಾಡಲೇ ಬೇಕು: ಮತದಾನ ಯಾಕೆ ಮಾಡಬೇಕು, ಆಸ್ಟ್ರೇಲಿಯಾದಂತೆ ಮತದಾನ ಕಡ್ಡಾಯ ಅಗತ್ಯವೇ? ಎಂಬ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಡಾ.ಕಲಾಂ, ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಹಾಗಾಗಿ ಮತದಾನದ ಮೂಲಕವೇ ಜನಪ್ರತಿನಿಧಿಗಳ ಆಯ್ಕೆ ಮಾಡುವುದು ಇಲ್ಲಿನ ಕ್ರಮ. ಆದ್ದರಿಂದ ಮತದಾನ ಮಾಡಲೇ ಬೇಕು ಎಂದರು.
ಚೀಟಿ ನಿರಾಕರಿಸಿದ ಡಾ.ಕಲಾಂ:ಡಾ.ಕಲಾಂ ಜತೆ ಸಂವಾದ ನಡೆಸಲು ಜಿಲ್ಲಾಡಳಿತ ಮೊದಲೇ ವಿದ್ಯಾರ್ಥಿಗಳಿಂದ ಪ್ರಶ್ನಾವಳಿ ತರಿಸಿತ್ತು. ಡಾ.ಕಲಾಂ ಭಾಷಣ ಮುಗಿಸಿದ ಕೂಡಲೇ ಸಂವಾದಕ್ಕೆ ಆಯ್ದ ಐದು ಪ್ರಶ್ನೆಗಳಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಕೂಡಲೇ ಚೀಟಿ ಪಡೆಯಲು ನಿರಾಕರಿಸಿದ ಕಲಾಂ, ವೇದಿಕೆಯಿಂದಲೇ ಸಭೆಯಲ್ಲಿದ್ದ ವಿದ್ಯಾರ್ಥಿಗಳಲ್ಲಿ ನೇರ ಪ್ರಶ್ನೆ ಕೇಳಿ ಸಂವಾದ ನಡೆಸಿದರು.