ತ್ರಿಕೋನ ಪ್ರೇಮಕ್ಕೆ ಯುವಕ ಬಲಿ
ಮೂಲ್ಕಿ: ಮೂಲ್ಕಿ ಠಾಣಾ ವ್ಯಾಪ್ತಿಯ ಪಾವಂಜೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ಬಳಿ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ, ವೃತ್ತಿಯಲ್ಲಿ ಬಸ್ ಚಾಲಕರಾಗಿರುವ ಕಾರ್ಕಳದ ಬೋಳ ನಿವಾಸಿ ಅವಿನಾಶ್ ಪೂಜಾರಿ (21) ಶವ ಪತ್ತೆಯಾಗಿದ್ದು ಮೇಲ್ನೋಟಕ್ಕೆ ಅಪಘಾತವೆಂದು ಕಂಡು ಬಂದಿದ್ದು ತನಿಖೆ ನಡೆಸಿದಾಗ ಕೊಲೆ ಪ್ರಕರಣ ಬಯಲಿಗೆ ಬಂದಿದೆ.
ಅವಿನಾಶ್ ಮೂಲ್ಕಿಯ ಕಾರ್ನಾಡಿನ ಮಸೀದಿಯ ಬಳಿಯ ಕಟ್ಟಡದಲ್ಲಿರುವ ಇಲೆಕ್ಟ್ರಿಷಿಯನ್ ಒಬ್ಬರ ಮಗಳನ್ನು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದು, ಆ ಯುವತಿ ಮಂಗಳೂರಿನಲ್ಲಿ ಕಾಲ್ ಸೆಂಟರ್ನಲ್ಲಿ ಉದ್ಯೋಗಿಯಾಗಿದ್ದಾಳೆ.
ಆಕೆ, ಇತ್ತೀಚೆಗೆ ಅವಿನಾಶ್ನನ್ನು ಕಡಗಣಿಸುತ್ತಿದ್ದು ಕಾಲ್ ಸೆಂಟರ್ ವಾಹನ ಚಾಲಕನೊಂದಿಗೆ ಒಡನಾಟವನ್ನಿಟ್ಟುಕೊಂಡಿದ್ದಾಳೆ ಎನ್ನಲಾಗಿದೆ.
ಈ ಬಗ್ಗೆ ತಿಳಿದ ಅವಿನಾಶ್ ಇತ್ತೀಚೆಗೆ ಆತ್ಮಹತ್ಯೆಗೆ ಯತ್ನಿಸಿದ್ದು ಸೋಮವಾರ ಕಾಲ್ಸೆಂಟರ್ಗೆ ಹೋಗಿ ಮಾತನಾಡಲು ಯತ್ನಿಸಿದಾಗ ಯುವತಿ ಮಾತನಾಡಲು ನಿರಾಕರಿಸಿದ್ದಳು.
ಬಳಿಕ, ಮಂಗಳವಾರ ನಸುಕಿನ ಜಾವ ಕಾಲ್ ಸೆಂಟರ್ ಉದ್ಯೋಗ ಮುಗಿಸಿ ಸ್ನೇಹಿತ ಚಾಲಕನೊಂದಿಗೆ ಟಾಟಾ ಸುಮೋದಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಬೈಕ್ನಲ್ಲಿ ಬಂದ ಅವಿನಾಶ್ ಪಾವಂಜೆ ಬಳಿ ಬೈಕ್ನಿಲ್ಲಿಸಿ ಮಾತನಾಡಲು ಯತ್ನಿಸಿದ್ದ.
ಆ ಸಂದರ್ಭ ಆರೋಪಿ ಚಾಲಕ ಟಾಟಾ ಸುಮೋವನ್ನು ಆತನ ಮೇಲೆ ಕೊಂಡು ಹೋಗಿ ಅಪಘಾತ ಎಸಗಿದ್ದಾಗಿ ದೂರಲಾಗಿದ್ದು, ಹೆದ್ದಾರಿಯ ಡಿವೈಡರ್ ಮೇಲೆ ಶವ ಪತ್ತೆಯಾಗಿದ್ದು ಆರೋಪಿಗಳಿಬ್ಬರ ವಿರುದ್ಧ ಮೂಲ್ಕಿ ಪೊಲೀಸರಿಗೆ ದೂರು ನೀಡಲಾಗಿದೆ.
ಆಲಂಕಾರು: ಎಂಡೋ ಪೀಡಿತೆ ಸಾವು
ಉಪ್ಪಿನಂಗಡಿ: ಎಂಡೋಸಲ್ಫಾನ್ ಪೀಡಿತರಾಗಿ ನರಕಯಾತನೆಯ ಬದುಕು ನಡೆಸುತ್ತಿದ್ದ ಪುತ್ತೂರು ತಾಲೂಕು ಆಲಂಕಾರು ಗ್ರಾಮದ ಗೌಡತ್ತಿಗೆ ಮೋನಪ್ಪ ಗೌಡರ ಪುತ್ರಿ ಪ್ರೇಮ (30) ಭಾನುವಾರ ರಾತ್ರಿ ಸ್ವಗೃಹದಲ್ಲಿ ನಿಧರಾದರು.
ಮೃತ ಪ್ರೇಮ ಕುಬ್ಜೆಯಾಗಿ ವಿಕಾರ ರೂಪದಲ್ಲಿದ್ದು, ಊಟ ಹಾಗೂ ತನ್ನ ದೈನಂದಿನ ಕೆಲಸ ಕಾರ್ಯಗಳಿಗೂ ಇತರರನ್ನು ಆಶ್ರಯಿಸಬೇಕಾಗಿತ್ತು. ಎಂಡೋ ಪೀಡಿತೆಯಾಗಿದ್ದರೂ ಸರ್ಕಾರದಿಂದ ಯಾವುದೇ ಅಂಗವಿಕಲ ವೇತನವಾಗಲೀ, ನೆರವಾಗಲೀ ಇವರಿಗೆ ಸಿಕ್ಕಿರಲಿಲ್ಲ. ಸರ್ಕಾರ ಇತ್ತೀಚೆಗೆ ಬಿಡುಗಡೆಗೊಳಿಸಿದ ಎಂಡೋ ಸಂತ್ರಸ್ತರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿತ್ತಾದರೂ ಪರಿಹಾರ ಧನ ವಿತರಣೆಯ ವಿಳಂಬದಿಂದಾಗಿ ಯಾವುದೇ ಸೌಲಭ್ಯ ಕೈ ಸೇರಿರಲಿಲ್ಲ. ಮೃತರ ಮನೆಗೆ ಆಲಂಕಾರು ಗ್ರಾ.ಪಂ. ಅಧ್ಯಕ್ಷ ದಯಾನಂದ ಗೌಡ ಬಡ್ಡಮೆ, ಜಿಲ್ಲಾ ಎಂಡೋ ವಿರೋಧಿ ಹೋರಾಟ ಸಮಿತಿ ಕಾರ್ಯದರ್ಶಿ ಜಯಕರ ಪೂಜಾರಿ ಕಲ್ಲೇರಿ ಭೇಟಿ ನೀಡಿ ಸಂತಾಪ ಸೂಚಿಸಿದರು.
ರಾಜೇಶ್ ಹತ್ಯೆ ಪ್ರಕರಣ; ಮೂವರ ಬಂಧನ
ಬಂಟ್ವಾಳ: ಬಿ.ಸಿ. ರೋಡ್ ಸಮೀಪ ರಿಕ್ಷಾ ನಿಲ್ದಾಣದಲ್ಲಿ ಇತ್ತೀಚೆಗೆ ರಿಕ್ಷಾ ಚಾಲಕ ರಾಜೇಶ್ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮಲ್ಲೂರು ಗ್ರಾಮದ ದೆಮ್ಮಲೆ ನಿವಾಸಿಗಳಾದ ಇರ್ಮಾನ್, ಇರ್ಷಾದ್ ಹಾಗೂ ಹುಸೈನ್ ಎಂದು ಹೇಳಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಲಾದ 1 ಬೈಕ್ ಹಾಗೂ 2 ತಲವಾರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಒಟ್ಟು ನಾಲ್ಕು ಮಂದಿ ನೇರವಾಗಿ ಶಾಮೀಲಾಗಿದ್ದು, ಈ ಪೈಕಿ ಅಲ್ತಾಫ್ ಹಾಗೂ ಕೃತ್ಯಕ್ಕೆ ಸಂಚು ರೂಪಿಸಿದ ಇಸಾಕ್ ತಲೆಮರೆಸಿಕೊಂಡಿದ್ದು ಶೋಧ ಮುಂದುವರಿದಿದೆ.
ಬಂಧಿತರನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಈ ಪೈಕಿ ಇರ್ಷಾದ್ನನ್ನು ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ಹಾಗೂ ಇನ್ನಿಬ್ಬರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮಚ್ಚೆ ನೀಡಿದ ಸುಳಿವು: ರಿಕ್ಷಾ ಚಾಲಕ ರಾಜೇಶ್ನನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ಆರೋಪಿಗಳ ಪತ್ತೆಗೆ ಆರೋಪಿಯೊಬ್ಬನ ಮುಖದಲ್ಲಿದ್ದ ಮಚ್ಚೆಯೇ ನೆರವಾಗಿದೆ ಎಂಬ ಅಂಶ ಇದೀಗ ಬಯಲಾಗಿದೆ. ಆರೋಪಿಯೊಹಬ್ಬನ ಮುಖದಲ್ಲಿ ಕಪ್ಪು ಮಚ್ಚೆ ಇತ್ತೆನ್ನುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅದನ್ನೇ ಸುಳಿವನ್ನಾಗಿಸಿರಿಕೊಂಡು ತನಿಖೆ ಚುರುಕುಗೊಳಿಸಿದ್ದರು. ಪೊಲೀಸ್ ತನಿಖೆಯಲ್ಲಿ ಹುಸೇನ್ ಎಂಬಾತನ ಮುಖದಲ್ಲಿ ಕಪ್ಪು ಮಚ್ಚೆ ಇದದ್ದನ್ನು ಗುರುತಿಸಿದ ಪೊಲೀಸರು ಆತನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಇನ್ನಿಬ್ಬರ ಬಗ್ಗೆ ಮಾಹಿತಿ ನೀಡಿದ್ದು, ಅವರನ್ನು ಬಂಧಿಸಲು ನೆರವಾಯಿತು.
ವ್ಯಕ್ತಿ ಆತ್ಮಹತ್ಯೆ
ಬ್ರಹ್ಮಾವರ: ಸೋಮವಾರ ಕೆಂಜೂರು ಗ್ರಾಮದ ಚಿತ್ತೇರಿ ಗುಡ್ಡೆ ಎಂಬಲ್ಲಿ ಜಯ ಕುಲಾಲ್ (36) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಕೊಡಿಸಿದ್ದರೂ ಗುಣಮುಖವಾಗದೇ ಇರುವುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೃದ್ಧ ಸಾವು
ಉಡುಪಿ: ಅಂಜಾರು ಗ್ರಾಮದ ಮುತ್ತೂರುಮನೆ ಎಂಬಲ್ಲಿ ರಘುನಾಥ ಪ್ರಭು (76) ಮದ್ಯಪಾನದಿಂದ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಅವರು 25 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದು, ವಾಪಾಸ್ ಮನೆಗೆ ಬಂದಿರಲಿಲ್ಲ. ಕೆಲವು ವರ್ಷಗಳಿಂದ ಬೆಂಗಳೂರು, ಇತ್ತೀಚೆಗೆ ಉಡುಪಿ ಪರಿಸರದಲ್ಲಿ ಸನ್ಯಾಸಿಯಾಗಿ ತಿರುಗಾಡುತ್ತಿದ್ದರು. ಅವರು ಮಂಗಳವಾರ ಉಡುಪಿ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮದ್ಯ ವ್ಯಸನದಿಂದಾಗಿ ಅವರು ಮೃತಪಟ್ಟಿದ್ದಾರೆ ಎಂದು ಅವರ ಮಗ ಶ್ರೀನಿವಾಸ ಪ್ರಭು ಹೇಳಿಕೆಯಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.