ರಾಹುಲ್ ಸಮಾವೇಶಕ್ಕೆ ಜನ ಕೈ ಕೊಡುವುದರಿಂದ, ಸಣ್ಣ ಪುಟ್ಟ ಸಭೆ ನಡೆಸುತ್ತಿದ್ದಾರೆ: ಅನಂತ ಕುಮಾರ್
ಮಂಗಳೂರು: ರಾಷ್ಟ್ರೀಯ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿಫಲ ನಾಯಕ. ರಾಹುಲ್ ಸಮಾವೇಶಗಳಿಗೆ ಜನ ಸೇರಿಸುವುದೇ ದೊಡ್ಡ ಕೆಲಸ ಆಗಿದೆ. ಇದಕ್ಕಾಗಿ ಸಮಾವೇಶ ಕೈ ಬಿಟ್ಟು ನೂರು, ಐವತ್ತು ಜನ ಸೇರಿಸಿ ಪ್ರಣಾಳಿಕೆ ಸಭೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಲೇವಡಿ ಮಾಡಿದರು.
ಕಾಂಗ್ರೆಸ್ ಗೆಲ್ಲುವುದಿಲ್ಲ ಎನ್ನುವುದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಗೂ ಗೊತ್ತಿದೆ. ಕಾಂಗ್ರೆಸ್ನಲ್ಲಿ ನಾಯಕರೇ ಇಲ್ಲ. ಸೋನಿಯಾ ತನ್ನ ಮಗ ರಾಹುಲ್ ನನ್ನು ಬಲಿಪಶು ಮಾಡಲು ಮನಸ್ಸಿಲ್ಲದೆ ಪ್ರಧಾನಿ ಅಭ್ಯರ್ಥಿ ಘೋಷಿಸಿಲ್ಲ ಎಂದು ಮಂಗಳವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಷ್ಟ್ರೀಯ ವಿಚಾರಧಾರೆ ಪ್ರಮುಖ: ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡಿದ ತಪ್ಪುಗಳಿಗೆ ಜನರು ಉತ್ತರ ನೀಡಿದ್ದಾರೆ. ಇದು ವಿಧನಾಸಭೆ ಚುನಾವಣೆಯಲ್ಲ, ಮುನ್ಸಿಪಾಲಿಟಿ ಚುನಾವಣೆಯಲ್ಲ. ಇದು ಲೋಕಸಭೆ ಚುನಾವಣೆ, ಇಲ್ಲಿ ರಾಷ್ಟ್ರೀಯ ವಿಚಾರ ಧಾರೆಗಳು ಪ್ರಮುಖವಾಗುತ್ತದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹತ್ತು ವರ್ಷಗಳ ಕಾಲ ಗುಜರಾತ್ನಲ್ಲಿ ಅಭಿವೃದ್ಧಿ ಮಾಡಿ ತೋರಿಸಿದ್ದಾರೆ. ಇದೇ ಮುಂದಿಟ್ಟುಕೊಂಡು ನಾವು ಮತ ಯಾಚಿಸುತ್ತಿದ್ದೇವೆ ಎಂದರು.
ಅಟಲ್ ಬಿಹಾರಿ ವಾಜಪೇಯಿ ಸರ್ಕಾರಕ್ಕೆ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. ಆಗ ಸರ್ಕಾರಕ್ಕೂ ಇತಿ, ಮಿತಿಗಳಿರುತ್ತವೆ. ಈ ಬಾರಿ ಎಲ್ಲರೂ ಬಿಜೆಪಿ ಬೆಂಬಲಿಸಿ ಸ್ಪಷ್ಟ ಬಹುಮತ ನೀಡಬೇಕು ಎಂದು ವಿನಂತಿಸಿದರು.
ಮೋದಿ ಅಲೆಯಲ್ಲಿ ಬಿಜೆಪಿ ಬಹುಮತ ಪಡೆಯಲಿದೆ. ಬಿಜೆಪಿ ಸ್ಪಷ್ಟ ಬಹುಮತ ಪಡೆದರೂ ಸರ್ಕಾರ ಅಂಗಪಕ್ಷಗಳ ಜತೆ ಸೇರಿಯೇ ಸರ್ಕಾರ ರಚಿಸಲಿದೆ. ಈಗ ಇರುವುದಕ್ಕಿಂತ ಹೆಚ್ಚು ಪಕ್ಷಗಳು ಎನ್ಡಿಎಗೆ ಸೇರ್ಪಡೆಯಾಗಲಿದೆ ಎಂದರು.
ರಣನೀತಿ: ಎರಡು ಕಡೆ ಸ್ಪರ್ಧಿಸುವ ಪರಿಪಾಠ ನೆಹರು ಕಾಲದಿಂದ ಬಂದಿದೆ. ಮೋದಿ ವಾರಾಣಸಿಯಿಂದ ಸ್ಪರ್ಧಿಸಿದರೆ ಅಕ್ಕಪಕ್ಕದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಸಂಪೂರ್ಣ ಜಯಭೇರಿ ಬಾರಿಸಲಿದೆ. ಎರಡು ಕಡೆ ಸ್ಪರ್ಧಿಸುವುದು ಚನಾವಣೆ ರಣನೀತಿ ಎಂದರು. ವಿರೋಧಿಗಳು ಕೆಳಮಟ್ಟದ ಟೀಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. 'ಬಿಲೊ ಬೆಲ್ಟ್' ಕೆಳಮಟ್ಟದ ಟೀಕೆ ಮಾಡುವುದಿಲ್ಲ ಎಂದು ಅನಂತಕುಮಾರ್ ಹೇಳಿದರು.
ಹಂಪನಕಟ್ಟೆಯಲ್ಲಿ ಸಚಿವ ರೈ ಕ್ಷಮೆ ಯಾಚಿಸಲಿ
ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಕರಾವಳಿ, ಮಂಗಳೂರು ಬಗ್ಗೆ ಸಮರ್ಥವಾಗಿ ಸಂಸತ್ನಲ್ಲಿ ಧ್ವನಿ ಎತ್ತಿದ್ದಾರೆ. ಅವರು ಜನ ಮೆಚ್ಚುವ ಕೆಲಸ ಮಾಡಿದ್ದಾರೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿಕೆ ಆಶ್ಚರ್ಯ ಹುಟ್ಟಿಸಿದೆ.
ರೈ ಆರೋಪಕ್ಕೆ ನಾವು ಪುರಾವೆ ಸಹಿತ ಉತ್ತರ ಕೊಟ್ಟಿದ್ದೇವೆ. ಈಗ ಉಳಿದಿರುವುದು ರಮಾನಾಥ ರೈಗಳು ಯಾವಾಗ ಕ್ಷಮೆ ಯಾಚಿಸುತ್ತಾರೆ, ಯಾವಾಗ ರಾಜಕೀಯ ಸನ್ಯಾಸ ಸ್ವೀಕರಿಸುತ್ತಾರೆ ಎನ್ನುವುದು. ಸಾರ್ವಜನಿಕ ಸ್ಥಳ ಹಂಪನಕಟ್ಟೆಗೆ ಎಲ್ಲ ಪತ್ರಕರ್ತರು, ಸಾರ್ವಜನಿಕರನ್ನು ಕರೆದು ನಾನು ಹೇಳಿದ್ದು ಸುಳ್ಳು, ಅಜ್ಞಾನದಿಂದ ಆರೋಪ ಮಾಡಿದ್ದೇನೆ. ದಯವಿಟ್ಟು ಕ್ಷಮಿಸಿ ಹೇಳಬೇಕು. ಇಲ್ಲವಾದರೆ ರೈಗಳು ರಾಜಕೀಯ ಸನ್ಯಾಸ ಪಡೆದುಕೊಳ್ಳಲಿ ಎಂದು ಅನಂತಕುಮಾರ್ ಹೇಳಿದರು.
ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರುಕ್ಮಯ ಪೂಜಾರಿ, ಶಾಸಕ ಮೋನಪ್ಪ ಭಂಡಾರಿ, ಮಾಜಿ ಶಾಸಕ ಎನ್.ಯೋಗೀಶ್ ಭಟ್, ಜಯರಾಮ ಶೆಟ್ಟಿ, ಸತೀಶ್ ಪ್ರಭು, ದಿವಾಕರ ಸಾಮಾನಿ ಇದ್ದರು.