ಉದ್ಯೋಗ ಖಾತ್ರಿ ರದ್ದು; ಬಿಜೆಪಿ ಹೇಳಿಕೆಗೆ ಆಕ್ಷೇಪ
ಮಂಗಳೂರು: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ರದ್ದು ಮಾಡುವಂತೆ ಬಿಜೆಪಿ ಮುಖಂಡರು ಹೇಳಿಕೆ ನೀಡುತ್ತಿರುವುದಕ್ಕೆ ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಉದ್ಯೋಗ ಖಾತ್ರಿ ಯೋಜನೆಯನ್ನು ರದ್ದು ಮಾಡುವುದಾಗಿ ಹೇಳಿದ್ದಾರೆ. ಎಲ್ಲೋ ಒಂದು ಕಡೆ ಯೋಜನೆ ಸರಿಯಾಗಿಲ್ಲ ಎಂದರೆ ಇಡೀ ಯೋಜನೆ ರದ್ದು ಮಾಡುವುದು ಸರಿ ಅಲ್ಲ. ಕೂಲಿಗಾಗಿ ಕಾಳು ಯೋಜನೆಯಂತಲ್ಲ ಈ ಉದ್ಯೋಗ ಖಾತ್ರಿ ಯೋಜನೆ. ತನ್ನ ಮನೆ ಸುತ್ತ ಮುತ್ತ ಕಾಮಗಾರಿ ನಡೆಸಲು ಈ ವಿಭಾಗದಲ್ಲಿ ಜನಸಾಮಾನ್ಯರಿಗೆ ಅವಕಾಶ ಇದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಈ ಯೋಜನೆಯಿಂದ ಸಹಸ್ರಾರು ಮಂದಿ ಉದ್ಯೋಗ ಪಡೆಯುತ್ತಿದ್ದಾರೆ. ಬ್ಯಾಂಕ್ ಖಾತೆಗಳ ಮೂಲಕವೇ ಹಣ ಸಂದಾಯ ಮಾಡಲಾಗುತ್ತಿದೆ. ಇಂಥ ಉತ್ತಮ ಯೋಜನೆ ರದ್ದು ಮಾಡುವುದು ಸರಿ ಅಲ್ಲ ಎಂದರು.
ಕಲ್ಲಡ್ಕ ಮಾನಸಿಕ: ಜನಾರ್ದನ ಪೂಜಾರಿ ಸಣ್ಣ ವಿಚಾರ ಮಾತನಾಡುತ್ತಾರೆ ಎಂದು ವಿರೋಧಿಗಳು ಆರೋಪಿಸುತ್ತಾರೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಸಂಸದ, ಬಿಜೆಪಿ ಅಭ್ಯರ್ಥಿ ನಳಿನ್ ಸರಿಯಾಗಿ ಮಾತನಾಡುತ್ತಾರೆಯೇ? ಕಲ್ಲಡ್ಕದ ಮಾನಸಿಕ ಸರಿಯಾಗಿ ಮಾತನಾಡುತ್ತಾರೆಯೇ? ಎಂದು ಪ್ರಶ್ನಿಸಿದರು. ವ್ಯತ್ಯಾಸ ಇಷ್ಟೇ. ಜನಾರ್ದನ ಪೂಜಾರಿ ಸತ್ಯ ಮಾತನಾಡುತ್ತಾರೆ, ಬಿಜೆಪಿಯವರು ಸುಳ್ಳು ಮಾತನಾಡುತ್ತಾರೆ. ಜನಾರ್ದನ ಪೂಜಾರಿ ಗೆದ್ದರೆ ಇಲ್ಲಿನ ಜನರ ಆಶೋತ್ತರಗಳಿಗೆ ಧ್ವನಿಯಾಗಬಲ್ಲರು ಎಂದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಉಳ್ಳಾಲ್, ಸದಾಶಿವ ಉಳ್ಳಾಲ್, ಪುರಸಭೆ ಸದಸ್ಯ ಉಸ್ಮಾನ್ ಇದ್ದರು.