ಕಳೆದ ಚುನಾವಣೆಗೆ ಬಳಕೆಯಾದ ವಾಹನ ಬಾಡಿಗೆ ಇನ್ನೂ ಸಿಕ್ಕಿಲ್ಲ!
ಉಪ್ಪಿನಂಗಡಿ: ಚುನಾವಣಾ ಕರ್ತವ್ಯ ನಿರ್ವಹಣೆಗೆ ಪೂರಕವಾಗಿ ಜಿಲ್ಲಾಡಳಿತಕ್ಕೆ ಹೆಚ್ಚುವರಿ ವಾಹನಗಳ ಅಗತ್ಯ ಇರುವುದರಿಂದ ಖಾಸಗಿ ಟೂರಿಸ್ಟ್ ವಾಹನಗಳನ್ನು ಸರ್ಕಾರಿ ಸೇವೆಗೆ ಬಳಸಿಕೊಳ್ಳುವುದು ಸಹಜ ನಿಯಮ. ಆದರೆ ವಿಳಂಬನೀತಿಯಿಂದಾಗಿ ಕಳೆದ ವಿಧಾನ ಸಭಾ ಚುನಾವಣೆಯ ವೇಳೆ ಬಳಕೆಯಾದ ವಾಹನಗಳಿಗೆ ಪಾವತಿಸಬೇಕಾದ ಶುಲ್ಕವನ್ನು ಇನ್ನೂ ಪಾವದಿಸದಿರದ ಕಾರಣ ಈ ಬಾರಿ ವಾಹನಗಳನ್ನು ನೀಡಲು ಟೂರಿಸ್ಟ್ ವಾಹನ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ.
ಕಳೆದ ಒಂದು ವರ್ಷದಿಂದ ಪಾವತಿಸಬೇಕಾದ ಶುಲ್ಕ ಪಾವತಿಸದಿರುವುದಲ್ಲದೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ವಾಹನಗಳನ್ನು ಒದಗಿಸಬೇಕೆಂದು ಸೂಚಿಸಿರುವುದು ವಾಹನಗಳ ಮಾಲೀಕರನ್ನು ಆಕ್ರೋಶಕ್ಕೆ ಒಳಪಡಿಸಿದೆ.
ಉದಾಹರಣೆಗೆ ಉಪ್ಪಿನಂಗಡಿಯ ವ್ಯಕ್ತಿಯೊಬ್ಬರ ಜೀಪನ್ನು ಕಳೆದ ವಿಧಾನಸಭಾ ಚುನಾವಣೆ ಸಲುವಾಗಿ ಮಂಗಳೂರು ಸಾರಿಗೆ ಇಲಾಖೆ ವಶಕ್ಕೆ ತೆಗೆದುಕೊಂಡು ಚುನಾವಣಾ ನಿಮಿತ್ತ ಪೊಲೀಸ್ ಇಲಾಖೆಗೆ ನೀಡಿತ್ತು. ಇಲಾಖೆ ಈ ಜೀಪನ್ನು 2013 ಏಪ್ರಿಲ್ನಿಂದ ಮೇ 6ರ ತನಕ ಬಳಸಿಕೊಂಡಿತ್ತು. ಚುನಾವಣೆ ಮುಗಿದು ವರ್ಷವಾಗುತ್ತಾ ಬಂದಿದ್ದರೂ ಈ ಜೀಪ್ನವರಿಗೆ ಬಾಡಿಗೆ ಹಣ ಇಂದಿಗೂ ಪಾವತಿ ಆಗಿಲ್ಲ ಎಂದು ಹೇಳಲಾಗಿದೆ.
ಹಣಕ್ಕಾಗಿ ಸತಾಯಿಸಿದರು: ಚುನಾವಣೆ ಸಲುವಾಗಿ ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗಳ ಓಡಾಟಕ್ಕೆ ನನ್ನ ಜೀಪ್ ಬಳಸಿದ್ದರು. 2013ರಂದು ಮೇ 6ರಂದು ನನ್ನ ಜೀಪು ಬಿಡುಗಡೆ ಮಾಡಿ ಪುತ್ತೂರು ಪೊಲೀಸ್ ಇಲಾಖೆಯಲ್ಲಿ ಬಾಡಿಗೆ ಪಡೆದುಕೊಳ್ಳುವಂತೆ ಮಂಗಳೂರಿನಲ್ಲಿ ಪತ್ರ ನೀಡಿದ್ದರು.
ಅದನ್ನು ಪುತ್ತೂರು ಪೊಲೀಸ್ ಅಧಿಕಾರಿಗಳಿಗೆ ತೋರಿಸಿದರೆ, ನೀವು ಬೆಳ್ತಂಗಡಿಗೆ ಹೋಗಿ, ಅಲ್ಲಿ ಕೊಡುತ್ತಾರೆ ಎಂದು ಕಳುಹಿಸಿಕೊಡುತ್ತಿದ್ದರು. ಬೆಳ್ತಂಗಡಿಗೆ ಹೋದರೆ ನಿಮ್ಮ ಈ ಬಾಡಿಗೆ ಪುತ್ತೂರಿನವರು ಕೊಡುವಂತದ್ದು ಎಂದು ಸಬೂಬು ಹೇಳಿ ಅಲ್ಲಿಂದ ಮತ್ತೆ ಕಳುಹಿಸಿಕೊಡುತ್ತಿದ್ದರು. ಇದೇ ರೀತಿ ಒಂದು ವರ್ಷದಿಂದ ಸತಾಯಿಸಿರುವ ಪೊಲೀಸರು ಇಂದಿಗೂ ಬಾಡಿಗೆ ನೀಡಿಲ್ಲ ಎಂದು ಜೀಪ್ ಚಾಲಕರೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.