ಭೀಕರ ರಸ್ತೆ ದುರಂತ: ಪೊಲೀಸ್ ಅಧಿಕಾರಿ ಪತ್ನಿ, ಚಾಲಕ ಸಾವು
ಕಾರ್ಕಳ: ಇಲ್ಲಿನ ಉಡುಪಿ-ಆಗುಂಬೆ ರಾಜ್ಯ ಹೆದ್ದಾರಿಯ ನೀರೆಬೈಲೂರು ಸಮೀಪದ ನೀರೆಜೆಡ್ಡು ಎಂಬಲ್ಲಿ ಬುಧವಾರ ಮಧ್ಯಾಹ್ನ ನಡೆದ ಭೀಕರ ಅಪಘಾತದಲ್ಲಿ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪತ್ನಿ ಮತ್ತು ವಾಹನದ ಚಾಲಕ ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟಿದ್ದಾರೆ. 3 ಮಂದಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಂಗಳೂರು ಪಶ್ಚಿಮ ವಲಯ ಎಸಿಪಿ ಲಾಬೂರಾಮ್ ಅವರ ಪತ್ನಿ ಗಾಯತ್ರಿ (35) ಹಾಗೂ ಪೊಲೀಸ್ ವಾಹನ ಬೊಲೆರೊದ ಚಾಲಕ ನಟರಾಜ್ (40) ಮೃತರು.
ಲಾಬೂರಾಮ್ ಅವರ ಮಕ್ಕಳಾದ ಪುನಿತಾ ಮತ್ತು ಹರಿತಾ, ಹಾಗೂ ಹೆಚ್ಚುವರಿ ಚಾಲಕ ರಮೇಶ್ ಘಟನೆಯಲ್ಲಿ ಗಾಯಗೊಂಡಿದ್ದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ವಿವರ: ಗಾಯತ್ರಿ ಉಡುಪಿಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಪೊಲೀಸ್ ವಾಹನದಲ್ಲಿ ಬರುತ್ತಿದ್ದಾಗ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದೆ. ಉಡುಪಿಯಿಂದ ಕಾರ್ಕಳದ ಕೆಡೆಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ವೇಗವಾಗಿ ಪೊಲೀಸ್ ವಾಹನ ಬೊಲೆರೊಗೆ ಡಿಕ್ಕಿ ಹೊಡೆದು ಅಪಘಾತದ ತೀವ್ರತೆಗೆ ಇಬ್ಬರೂ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಪೊಲೀಸ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್ಸಿಗೂ ಭಾಗಶಃ ಹಾನಿಯಾಗಿದೆ. ಬಸ್ ಪ್ರಯಾಣಿಕರಿಗೆ ಯಾವುದೇ ತೊಂದರೆಗಳಾಗಿಲ್ಲ. ಮಂಗಳೂರು ಪೊಲೀಸ್ ಕಮಿಷನರ್ ಆರ್. ಹಿತೇಂದ್ರ ಮತ್ತು ಉಡುಪಿ ಎಸ್ಪಿ ಡಾ. ಬೋರಲಿಂಗಯ್ಯ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ನಂತರ ಮಣಿಪಾಲ ಆಸ್ಪತ್ರೆಯಲ್ಲಿರುವ ಗಾಯಾಳುಗಳನ್ನೂ ಭೇಟಿ ಮಾಡಿದರು.
ಮೃತ ಗಾಯತ್ರಿ ಅವರ ಪತಿ ಲಾಬೂ ರಾಮ್ ಕೆಲವರ್ಷಗಳ ಹಿಂದೆ ಉಡುಪಿಯಲ್ಲಿ ಹೆಚ್ಚುವರಿ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದರು.