ಎಂಡೋ ಎಫೆಕ್ಟ್: ಬಾಡಿದ ಕಮಲ...
ಮಂಗಳೂರು: ಹೆಸರು ತುಂಗಪ್ಪ ಬಂಗೇರ, ವಯಸ್ಸು 32. ಈತನ ತಂಗಿ ಮೋನಮ್ಮನಿಗೆ 30 ವರ್ಷ, ಸಹೋದರ ದಿನೇಶನಿಗೆ 28, ಇನ್ನೊಬ್ಬ ಗಂಗಯ್ಯಗೆ 26 ವರ್ಷ.
ಈ ನಾಲ್ವರಿಗೂ ಮನೆಯೇ ಸರ್ವಸ್ವ. ಜನಿಸಿ ಇಷ್ಟು ವರ್ಷವಾದರೂ ಹೊರಪ್ರಪಂಚ ನೋಡಿಲ್ಲ, ಒಂದಕ್ಷರ ಕಲಿತವರಲ್ಲ, ಅಮ್ಮನ ಮಾತಿಗೆ 'ಹೂಂ'ಗುಡುತ್ತಾರೆ. ಇವರ ತಂದೆ ಪರಿಶಿಷ್ಟ ಜಾತಿಯ ಮೊಗೇರ ಜನಾಂಗದವರು. ತನಿಯ ನಾಲ್ಕು ವರ್ಷ ಹಿಂದೆ ಅನಾರೋಗ್ಯದಿಂದ ತೀರಿಹೋದರು. ಈಗ ಜೀವನಕ್ಕೆ ತಾಯಿಯೇ ಅಧಾರ. ದೃಷ್ಟಿಹೀನರಾಗಿ ಸ್ವಂತ ದುಡಿಯಲೂ ಆಗದೆ ತಾಯಿಯ ಆಸರೆಯಲ್ಲಿ ದಿನಕಳೆಯುತ್ತಿದ್ದಾರೆ. ಮಕ್ಕಳು ವಯಸ್ಸಿಗೆ ಬಂದರೂ ಲವಲವಿಕೆ ಇಲ್ಲದೆ, ಮನೆಯ ಜವಾಬ್ದಾರಿ ಹೊತ್ತುಕೊಳ್ಳಲಾಗದೆ ಇರುವುದನ್ನು ನೋಡುತ್ತಾ ತಾಯಿ ಕಮಲ ಕಣ್ಣೀರ್ಗರೆಯುತ್ತಾರೆ. ಮಕ್ಕಳು ಜೀವಂತವಿದ್ದರೂ ಹೆತ್ತಾಕೆಯನ್ನು ಸಲಹಲು ಸಮರ್ಥರಲ್ಲ. ಹೀಗಾಗಿ ತನ್ನ ನಂತರಕ್ಕೆ ಈ ಮಕ್ಕಳ ಪೋಷಣೆ ನೆನೆದು ನಿತ್ಯವೂ ಕಣ್ಣೀರಲ್ಲಿ ಕೈತೊಳೆಯುತ್ತಾರೆ.
ಬಾಲ್ಯದಲ್ಲೇ ದೃಷ್ಟಿಹೀನ: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ನೆರೆಲೊಪಲ್ಕೆಯ 60 ಸೆಂಟ್ಸ್ ಜಾಗದಲ್ಲಿ ಮಕ್ಕಳ ಜತೆ ಕಮಲ ವಾಸವಿದ್ದಾರೆ. ನೇತ್ರಾವತಿ ಸ್ನಾನಘಟ್ಟಕ್ಕೆ ಮುನ್ನ ಸೇತುವೆ ಬಳಿ ಬಲಕ್ಕೆ ಒಂದೂವರೆ ಕಿ.ಮೀ. ರಸ್ತೆಯಲ್ಲಿ ಸಾಗಿದರೆ ಕಮಲಳ ಮನೆ ಸಿಗುತ್ತದೆ.
ಹೆಂಚಿನ ಹಳೆ ಮನೆಯಲ್ಲಿ ಈ ಐದು ಮಂದಿ ವಾಸವಿದ್ದಾರೆ. ಎಂಟ್ಹತ್ತು ತೆಂಗಿನ ಮರ, ಒಂದಿಷ್ಟು ಅಡಕೆ ಸಸಿ ಬಿಟ್ಟರೆ ಜೀವನಕ್ಕೆ ಬೇರೇನೂ ಇಲ್ಲ. ನಾಲ್ವರು ಮಕ್ಕಳು ಕುರುಡರಾದ ಕಾರಣ ಕಮಲ(60) ಕೆಲಸಕ್ಕೆ ಹೋಗುವುದಿಲ್ಲ. ಮಕ್ಕಳಿಗೆ ಈಕೆಯೇ ವಾರಸುದಾರರಾದ್ದರಿಂದ ಕುಟುಂಬ ಪೊರೆಯಲು ಇನ್ನಿಲ್ಲದ ಪಾಡು ಪಡುತ್ತಾರೆ. ನಾಲ್ವರು ಮಕ್ಕಳಿಗೆ ಬಾಲ್ಯದಲ್ಲೇ ದೃಷ್ಟಿಹೋಗಿತ್ತು. ಔಷಧ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಕೈಚೆಲ್ಲಿ ಕೂತಿದ್ದಾರೆ ಕಮಲ.
ಎಂಡೋ ಸಂತ್ರಸ್ತರೇ?: ಅಂಗವಿಕಲ ಕೋಟಾದಡಿ ನಾಲ್ವರಿಗೆ ಮಾಸಿಕ ಪಿಂಚಣಿ ಸಿಗುತ್ತಿದೆ. ಕಮಲಗೆ ವಿಧವಾ ವೇತನ ಬರುತ್ತಿದೆ. ಇದುವೇ ಮನೆಗೆ ಜೀವನಾಧಾರ. ಮೂರು ಮಕ್ಕಳಿಗೆ ಮಾಸಿಕ ತಲಾ ರು. 1,200, ತುಂಗಪ್ಪನಿಗೆ ರು. 500. ಈತನಲ್ಲಿ ದೃಷ್ಟಿಮಾಂದ್ಯತೆ ಬಗ್ಗೆ ಅಧಿಕೃತ ದಾಖಲೆ ಇಲ್ಲ. ಹಾಗಾಗಿ ಪಿಂಚಣಿಯೂ ಕಡಿಮೆ. ಈ ಮೊತ್ತವನ್ನು ಮುಂದಿನ ತಿಂಗಳ ಪಿಂಚಣಿ ಬರುವವರೆಗೆ ಕೂಡಿಡುತ್ತಾರೆ ಕಮಲ. ಬಡತನ ಬೇಗೆಯಲ್ಲಿ ಬಸವಳಿದಿರುವ ಕಮಲಳ ಮಕ್ಕಳು ಯಾಕಾಗಿ ದೃಷ್ಟಿಹೀನರಾದರು ಎಂದರೆ ಯಾರಿಗೂ ಗೊತ್ತಿಲ್ಲ. ಎಂಡೋ ಸಲ್ಫಾನ್ನ್ನು ಈ ಪ್ರದೇಶದಲ್ಲೂ ಗೇರು ಮರಕ್ಕೆ ಸಿಂಪಡಿಸಿದ್ದು, ಅದೇ ಕಾರಣವಾಯಿತೇ ಎಂಬುದು ಸ್ಪಷ್ಟವಿಲ್ಲ. ತಮ್ಮನ್ನು ಎಂಡೋ ಸಂತ್ರಸ್ತರ ಪಟ್ಟಿಯಲ್ಲಿ ಸೇರಿಸಿ ಎಂದು ಒತ್ತಾಯಿಸಿದರೂ ಅಧಿಕಾರಿಗಳ ಕಿವಿಗೆ ಇದು ಕೇಳಿಸಿಲ್ಲ ಎನ್ನುತ್ತಾರೆ ಕಮಲ.
ಅಜ್ಜಿ ಮನೆಯಲ್ಲಿ ಆಸರೆ: ಮಕ್ಕಳನ್ನು ಬಿಟ್ಟು ಹೊರಗೆ ಹೋಗಲು ಕಮಲಗೆ ಸಾಧ್ಯವಾಗುತ್ತಿಲ್ಲ. ಅವರ ಬೇಕುಬೇಡಗಳಿಗೆ ಸ್ಪಂದಿಸುವವರು ಬೇರೆ ಯಾರೂ ಇಲ್ಲಿಲ್ಲ. ಮನೆಗೆ ಬೇಕಾದ ಸಮಾನು ಸರಂಜಾಮನ್ನು ಅವರಿವರಲ್ಲಿ ಕಾಡಿಬೇಡಿ ತರಿಸುತ್ತಾರೆ. ನಾಲ್ವರು ಮಕ್ಕಳನ್ನು ಸರದಿಯಂತೆ ತಿಂಗಳಿಗೊಮ್ಮೆ ಕೊಯ್ಯೂರಿನ ಪಾಂಡೇಲಿನಲ್ಲಿರುವ ತವರರಿಗೆ ಮಾವಂದಿರು ಕರೆದುಕೊಂಡು ಹೋಗುತ್ತಾರೆ. ಮಕ್ಕಳಿಗೆ ಅನಾರೋಗ್ಯವಾದರೆ ಕಮಲಳೇ ಕರೆದುಕೊಂಡು ಹೋಗಿ ಔಷಧ ತರುತ್ತಾರೆ. ಆಗ ಉಳಿದ ಮಕ್ಕಳನ್ನು ಕೂಡಿ ಹಾಕಿ ತೆರಳುತ್ತಾರೆ. ಇಂಥ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ಮರುಗುತ್ತಾರೆ.
ಆತ್ಮಭೂಷಣ್