ಪ್ರತಿಭಾ ಕುಳಾಯಿ ಪ್ರಮಾಣ ಮಾಡಲಿ: ಕೋಡಿಕೆರೆ ನಿವಾಸಿಗಳು
ಮಂಗಳೂರು: 'ಕೋಡಿಕೆರೆ ನಿವಾಸಿಗಳು ಕಾಂಗ್ರೆಸ್ ಸದಸ್ಯೆ ಪ್ರತಿಭಾ ಕುಳಾಯಿಯವರ ಮೇಲೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬುವುದು ಸತ್ಯವಾದರೆ, ತೋಕೂರು ನಾಗಬನ ಮತ್ತು ಜಾರಾಂದಾಯ ದೈವಸ್ಥಾನದೆದುರು ಪ್ರಮಾಣ ಮಾಡಲಿ' ಎಂದು ಕೋಡಿಕೆರೆ ನಿವಾಸಿಗಳು ಆಗ್ರಹಿಸಿದ್ದಾರೆ.
ಹೊಸಬೆಟ್ಟು ವಾರ್ಡಿನ ಕಾರ್ಪೊರೇಟರ್ ಪ್ರತಿಭಾ ಕುಳಾಯಿಯವರು ಮಾ. 30 ರಂದು ಕೋಡಿಕೆರೆಗೆ ಮತಯಾಚನೆಗೆಂದು ಬಂದ ಸಂದರ್ಭದಲ್ಲಿ ಶಾಸಕ ಮೈದಿನ್ ಬಾವ ಮತ್ತು ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿಯವರು ಮಾ. 27 ರಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಕೋಡಿಕೆರೆ ನಿವಾಸಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಗ್ಗೆ ಪ್ರಶ್ನಿಸಲಾಗಿತ್ತು ಎಂದು ಕೋಡಿಕೆರೆ ನಿವಾಸಿ ಗಂಗಾ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಸಂದರ್ಭ ಪ್ರತಿಭಾ ಅವರು ನಿವಾಸಿಗಳ ವಿರುದ್ಧ ಹರಿಹಾಯ್ದಿದ್ದು, ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ನಂತರ ನಿಮ್ಮನ್ನು ನೋಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದರು. ಮರುದಿನ ಸುರತ್ಕಲ್ ಠಾಣೆಯಲ್ಲಿ ಮತಯಾಚನೆಗೆ ಹೋದ ಸಂದರ್ಭ ಲೈಂಗಿಕ ಕಿರುಕುಳ, ಮೈಮೇಲೆ ಕೈ ಹಾಕಿ ಸೀರೆ ಎಳೆದಿದ್ದಾರೆ ಎಂಬುದಾಗಿ ಸುಳ್ಳು ದೂರು ನೀಡಿರುತ್ತಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ರಮಣಿ ಕೋಡಿಕೆರೆ, ನವನೀತ್ ಕೋಡಿಕೆರೆ, ನಾಗರಾಜ್, ಮುರಳೀಧರ್ ಇದ್ದರು.