ಬಿಜೆಪಿ, ಕಾಂಗ್ರೆಸ್ನಿಂದ ಮಹಿಳೆಯರ ರಕ್ಷಣೆ ಅಸಾಧ್ಯ
ಪುತ್ತೂರು: ಬಿಜೆಪಿ ಮತ್ತು ಕಾಂಗ್ರೆಸ್ ಮಹಿಳೆಯರ ರಕ್ಷಣೆ ಮಾಡಲು ಸಾಧ್ಯವಿಲ್ಲದ ಪಕ್ಷಗಳು ಎಂಬುದನ್ನು ಸಾಬೀತುಪಡಿಸಿವೆ. ಮಹಿಳಾ ರಕ್ಷಣೆಗಾಗಿ ಹೋರಾಟ ನಡೆಸುವವರ ವಿರುದ್ಧ ಸುಳ್ಳು ಕೇಸು ದಾಖಲಿಸಿ ಜೈಲಿಗೆ ಕಳುಹಿಸಿರುವುದೇ ಇವರ ಸಾಧನೆ ಎಂದು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಬಿ.ಎಂ. ಭಟ್ ಆರೋಪಿಸಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಜಿರೆ, ಧರ್ಮಸ್ಥಳದಲ್ಲಿ 452 ಅಸಹಜ ಸಾವುಗಳು ನಡೆದಿವೆ. ರಾಜ್ಯದಲ್ಲಿ 24600 ಮಹಿಳಾ ನಾಪತ್ತೆ ಪ್ರಕರಣಗಳು ನಡೆದಿವೆ. ಆದರೆ ಈ ಪ್ರಕರಣಗಳಿಗೆ ಸಂಬಂಧಿಸಿ ಕಾಂಗ್ರೆಸ್ ಮತ್ತು ಬಿಜೆಪಿ ಸೌಜನ್ಯಕ್ಕಾದರೂ ಒಂದು ಹೋರಾಟ ನಡೆಸಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಸೌಜನ್ಯಾ ಪರ ಹೋರಾಟ ನಡೆಸಿದರೆ 7 ವರ್ಷ ಶಿಕ್ಷೆಯಾಗುವ ಕೇಸು ಹಾಕಲಾಗುವುದು ಎಂದು ಬೆದರಿಕೆ ಒಡ್ಡಿದ್ದರು. ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ತಪ್ಪಿಯೂ ಈ ವಿಚಾರದ ಬಗ್ಗೆ ಮಾತನಾಡಿಲ್ಲ. ಬಿಜೆಪಿ ಜಿಲ್ಲಾಧ್ಯಕ್ಷರು ಬೆರಳು ಕತ್ತರಿಸುವ ಬೆದರಿಕೆ ಹಾಕಿದ್ದರು. ಇಂಥವರಿಂದ ಮಹಿಳೆಯರಿಗೆ ನ್ಯಾಯ ಸಿಗಲು ಸಾಧ್ಯವೇ ಎಂದು ಪ್ರಶ್ನಿಸಿದರು.