ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವಂತಿಗೆ ಬಾಕಿ: 30 ಮಕ್ಕಳು ಮದರಸದಿಂದ ಮನೆಗೆ

Rashmi Kasaragodu
Updated On : 4 Apr 2014, 2:30 am

ಬಂಟ್ವಾಳ: ಇಲ್ಲಿನ ಟಿಪ್ಪು ನಗರದ ಜುಮ್ಮಾ ಮಸೀದಿಯ ಜಮಾತ್ನಲ್ಲಿರುವ ತಿಂಗಳ ವಂತಿಗೆಯನ್ನು ಬಾಕಿ ಇಟ್ಟಿರುವ 23 ಕುಟುಂಬಗಳ ಸದಸ್ಯತ್ವವನ್ನು ಮಸೀದಿಯ ಆಡಳಿತ ಕಮಿಟಿ ರದ್ದುಪಡಿಸಿದ್ದು, ಮದರಸದಲ್ಲಿ ಅರೆಬಿಕ್ ಶಿಕ್ಷಣ ಪಡೆಯುತ್ತಿದ್ದ 30 ಮಕ್ಕಳನ್ನು ವಾಪಸ್ ಕಳಿಸಿರುವ ವಿಚಾರ ಇದೀಗ ವಿವಾದಕ್ಕೆ ಕಾರಣವಾಗಿದೆ.
ಘಟನೆ ವಿವರ: ಇಲ್ಲಿನ ಜುಮ್ಮಾ ಮಸೀದಿಯಲ್ಲಿ ನೂರಕ್ಕೂ ಆಧಿಕ ಮುಸ್ಲಿಂ ಕುಟುಂಬ ನೋಂದಣಿಯಾಗಿತ್ತು. ಈ ಪೈಕಿ 23 ಕುಟುಂಬಗಳು ಮಸೀದಿಯ ವಂತಿಗೆ ಹಣವನ್ನು ಬಾಕಿ ಇಟ್ಟಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಆದರೆ, ಜುಮ್ಮಾ ಮಸೀದಿಯ ಈ ಧೋರಣೆಯನ್ನು ವಿರೋಧಿಸಿ ಸದಸ್ಯತ್ವ ಕಳೆದುಕೊಂಡ ಕುಟುಂಬಗಳು ಬಂಟ್ವಾಳ ನಗರ ಠಾಣೆಯ ಮೆಟ್ಟಿಲೇರಿದೆ. ಸಂತ್ರಸ್ತರ ಪರವಾಗಿ ಸದಸ್ಯತ್ವ ಕಳೆದುಕೊಂಡಿರುವ ಬಿ.ಎಂ. ಇಸ್ಮಾಯಿಲ್ ಹಾಗೂ ಇತರರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮೌಖಿಕ ದೂರು ನೀಡಿದ್ದು, ಅವರು ನೀಡಿದ ಸೂಚನೆಯಂತೆ ಬಂಟ್ವಾಳ ನಗರ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ಸದಸ್ಯತ್ವ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ 23 ಕುಟುಂಬಗಳ 30 ಮಕ್ಕಳನ್ನು ಮದರಸದಿಂದ ಹೊರ ಹಾಕಿರುವ ಜಮಾ ಅತೆ ಕಮಿಟಿ ಕ್ರೂರವಾಗಿ ವರ್ತಿಸಿದೆ. ಜಿಲ್ಲೆಯಲ್ಲಿ ಇಂತಹ ಘಟನೆ ಇದೇ ಮೊದಲ ಬಾರಿ ನಡೆದಿದ್ದು, ಜಮಾ ಅತೆಯಿಂದ ಯಾರನ್ನೇ ಹೊರ ಹಾಕುವ ಅಧಿಕಾರ ಕಮಿಟಿಗೆ ಇಲ್ಲ, ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಇಸ್ಮಾಯಿಲ್ ತಿಳಿಸಿದ್ದಾರೆ. ಬಾಕಿ ಇರಿಸಿರುವ ಹಣವನ್ನು ಮಾರ್ಚ್ 31ರೊಳಗೆ ಪಾವತಿಸಬೇಕು, ತಪ್ಪಿದಲ್ಲಿ ನಿರ್ಣಯ ಸಂಖ್ಯೆ 19ರ ಅನ್ವಯ ಸದಸ್ಯತ್ವ ರದ್ದುಪಡಿಸಲಾಗುವುದು ಎಂದು 28ರಂದು ನೀಡಿದ ನೋಟಿಸ್ನಲ್ಲಿ ಹೇಳಲಾಗಿತ್ತು. ಅದರಂತೆ ಇದೀಗ 23 ಕುಟುಂಬಗಳ ಸದಸ್ಯತ್ವ ರದ್ದುಪಡಿಸಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement