ವಂತಿಗೆ ಬಾಕಿ: 30 ಮಕ್ಕಳು ಮದರಸದಿಂದ ಮನೆಗೆ
ಬಂಟ್ವಾಳ: ಇಲ್ಲಿನ ಟಿಪ್ಪು ನಗರದ ಜುಮ್ಮಾ ಮಸೀದಿಯ ಜಮಾತ್ನಲ್ಲಿರುವ ತಿಂಗಳ ವಂತಿಗೆಯನ್ನು ಬಾಕಿ ಇಟ್ಟಿರುವ 23 ಕುಟುಂಬಗಳ ಸದಸ್ಯತ್ವವನ್ನು ಮಸೀದಿಯ ಆಡಳಿತ ಕಮಿಟಿ ರದ್ದುಪಡಿಸಿದ್ದು, ಮದರಸದಲ್ಲಿ ಅರೆಬಿಕ್ ಶಿಕ್ಷಣ ಪಡೆಯುತ್ತಿದ್ದ 30 ಮಕ್ಕಳನ್ನು ವಾಪಸ್ ಕಳಿಸಿರುವ ವಿಚಾರ ಇದೀಗ ವಿವಾದಕ್ಕೆ ಕಾರಣವಾಗಿದೆ.
ಘಟನೆ ವಿವರ: ಇಲ್ಲಿನ ಜುಮ್ಮಾ ಮಸೀದಿಯಲ್ಲಿ ನೂರಕ್ಕೂ ಆಧಿಕ ಮುಸ್ಲಿಂ ಕುಟುಂಬಗಳು ನೋಂದಣಿಯಾಗಿತ್ತು. ಈ ಪೈಕಿ 23 ಕುಟುಂಬಗಳು ಮಸೀದಿಯ ವಂತಿಗೆ ಹಣವನ್ನು ಬಾಕಿ ಇಟ್ಟಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಆದರೆ, ಜುಮ್ಮಾ ಮಸೀದಿಯ ಈ ಧೋರಣೆಯನ್ನು ವಿರೋಧಿಸಿ ಸದಸ್ಯತ್ವ ಕಳೆದುಕೊಂಡ ಕುಟುಂಬಗಳು ಬಂಟ್ವಾಳ ನಗರ ಠಾಣೆಯ ಮೆಟ್ಟಿಲೇರಿದೆ. ಸಂತ್ರಸ್ತರ ಪರವಾಗಿ ಸದಸ್ಯತ್ವ ಕಳೆದುಕೊಂಡಿರುವ ಬಿ.ಎಂ. ಇಸ್ಮಾಯಿಲ್ ಹಾಗೂ ಇತರರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮೌಖಿಕ ದೂರು ನೀಡಿದ್ದು, ಅವರು ನೀಡಿದ ಸೂಚನೆಯಂತೆ ಬಂಟ್ವಾಳ ನಗರ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ಸದಸ್ಯತ್ವ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ 23 ಕುಟುಂಬಗಳ 30 ಮಕ್ಕಳನ್ನು ಮದರಸದಿಂದ ಹೊರ ಹಾಕಿರುವ ಜಮಾ ಅತೆ ಕಮಿಟಿ ಕ್ರೂರವಾಗಿ ವರ್ತಿಸಿದೆ. ಜಿಲ್ಲೆಯಲ್ಲಿ ಇಂತಹ ಘಟನೆ ಇದೇ ಮೊದಲ ಬಾರಿ ನಡೆದಿದ್ದು, ಜಮಾ ಅತೆಯಿಂದ ಯಾರನ್ನೇ ಹೊರ ಹಾಕುವ ಅಧಿಕಾರ ಕಮಿಟಿಗೆ ಇಲ್ಲ, ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಇಸ್ಮಾಯಿಲ್ ತಿಳಿಸಿದ್ದಾರೆ.
ಬಾಕಿಯಿರಿಸಿರುವ ಹಣವನ್ನು ಮಾರ್ಚ್ 31ರೊಳಗೆ ಪಾವತಿಸಬೇಕು, ತಪ್ಪಿದಲ್ಲಿ ನಿರ್ಣಯ ಸಂಖ್ಯೆ 19 ರ ಅನ್ವಯ ಸದಸ್ಯತ್ವ ರದ್ದು ಪಡಿಸಲಾಗುವುದು ಎಂದು 28ರಂದು ನೀಡಿದ ನೋಟಿಸ್ನಲ್ಲಿ ಹೇಳಲಾಗಿತ್ತು. ಅದರಂತೆ ಇದೀಗ 23 ಕುಟುಂಬಗಳ ಸದಸ್ಯತ್ವ ರದ್ದು ಪಡಿಸಲಾಗಿದೆ.
ಮಕ್ಕಳು ಮದರಸದಿಂದ ಮನೆಗೆ..: ಮಸೀದಿ ಮದರಸದಲ್ಲಿ ಅರೆಬಿಕ್ ಶಿಕ್ಷಣ ಪಡೆಯುತ್ತಿರುವ ಸದಸ್ಯತ್ವ ಕಳೆದುಕೊಂಡ 23 ಕುಟುಂಬಗಳ 30 ಮಕ್ಕಳನ್ನೂ ಮನೆಗೆ ವಾಪಾಸ್ ಕಳುಹಿಸಿರುವುದೂ ತಪ್ಪು ಎನ್ನುವುದು ಸಂತ್ರಸ್ತರ ಅಳಲು. ಬುಧವಾರ ಹಾಗೂ ಗುರುವಾರ ಮದರಸಕ್ಕೆ ತೆರಳಿದ್ದ ತಮ್ಮ ಮಕ್ಕಳನ್ನು ವಾಪಾಸ್ ಕಳುಹಿಸಲಾಗಿದೆ ಎಂದು ಮನೆ ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಬಾಕಿಯಿದ್ದ ವಂತಿಗೆಯನ್ನು ಪಾವತಿಸಲು ಮುಂದಾದ ಕುಟುಂಬಗಳಿಗೆ ಮುಂದಿನ ಮೂರು ತಿಂಗಳ ವಂತಿಗೆಯನ್ನೂ ಹೆಚ್ಚುವರಿಯಾಗಿ ಠೇವಣಿ ಇಡಬೇಕು ಎಂದು ಆಡಳಿತ ಕಮಿಟಿ ಸೂಚಿಸಿದೆ ಎನ್ನಲಾಗಿದ್ದು, ಇದು ಸಂತ್ರಸ್ತರನ್ನು ಮತ್ತಷ್ಟು ಕೆರಳಿಸಿದೆ.
'ಮಸೀದಿ ಸದಸ್ಯರ ಸಭೆ ಕರೆದು ಕ್ರಮ'
ಬಂಟ್ವಾಳ: ಮಸೀದಿ ಜಮಾಅತ್ ವ್ಯಾಪ್ತಿಯ 23 ಕುಟುಂಬಗಳ ಸದಸ್ಯತ್ವ ರದ್ದು ಹಾಗೂ ಮದ್ರಸದಿಂದ ಮಕ್ಕಳನ್ನು ವಾಪಸ್ ಕಳುಹಿಸಿರುವ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಲೊರೆಟ್ಟೋ ಪದವು ಬದ್ರ್ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್, ಮಸೀದಿ ಸರ್ವ ಸದಸ್ಯರ ಸಭೆ ಕರೆದು ಮುಂದಿನ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ. ಮಸೀದಿಯಲ್ಲಿ ತಿಂಗಳ ವೇತನಕ್ಕೆ ರು. 22 ಸಾವಿರ ವೆಚ್ಚವಾಗುತ್ತಿದ್ದು, ನೀಡಬೇಕಾದ ವಂತಿಗೆಯನ್ನು ಬಾಕಿ ಇರಿಸಿರುವುದರಿಂದ ಮಸೀದಿ ಆದಾಯಕ್ಕೆ ತೊಡಕುಂಟಾಗುತ್ತಿದೆ. ಬಾಕಿ ಹಣವನ್ನು ಕಟ್ಟುವಂತೆ ಅನೇಕ ಬಾರಿ ನೋಟಿಸ್ ನೀಡಿ ಸೂಚಿಸಲಾಗಿತ್ತು. ಆದರೆ ಅವರು ನಿರ್ಲಕ್ಷ್ಯ ತೋರಿದ್ದಾರೆ. ಈ ಬಗ್ಗೆ ಫೆ.28ರ ಕಮಿಟಿ ಸಭೆಯಲ್ಲಿ ಸರ್ವರ ಉಪಸ್ಥಿತಿಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಪ್ರಕರಣದಲ್ಲಿ ಯಾವುದೇ ಏಕಪಕ್ಷೀಯ ಅಥವಾ ಸರ್ವಾಧಿಕಾರ ಪ್ರವೃತ್ತಿ ತೋರಿಲ್ಲ ಎಂದು ತಿಳಿಸಿದ್ದಾರೆ.