ಶೇ.100 ಫಲಿತಾಂಶಕ್ಕಾಗಿ ಪರೀಕ್ಷೆಯನ್ನೇ ಬರೆಯದಂತೆ ತಡೆದರು!
ಬಂಟ್ವಾಳ: ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಬೇಕೆಂಬ ಉದ್ದೇಶದಿಂದ ಕಲಿಕೆಯಲ್ಲಿ ಹಿಂದಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಪರೀಕ್ಷೆಗೇ ಹಾಜರಾಗದಂತೆ ಶಾಲೆಯ ಉಪ ಪ್ರಾಂಶುಪಾಲರೇ ತಡೆಯೊಡ್ಡಿದ ಪ್ರಕರಣವೊಂದು ಸಿದ್ದಕಟ್ಟೆ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಶಾಲೆ ಶೇ.94 ಫಲಿತಾಂಶ ಪಡೆದಿತ್ತು. ಈ ಬಾರಿ ಶೇ.100 ಫಲಿತಾಂಶ ಪಡೆಯಬೇಕೆಂಬ ಉದ್ದೇಶದಿಂದ ತಂತ್ರ ಹೆಣೆದ ಉಪಪ್ರಾಂಶುಪಾಲರು, ಕಲಿಕೆಯಲ್ಲಿ ಹಿಂದುಳಿದಿದ್ದ ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗದಂತೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 6 ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗದಂತೆ ಉಪ ಪ್ರಾಂಶುಪಾಲರು ಹೇಳಿದ್ದರು. ಈ ಪೈಕಿ ನಾಲ್ಕು ವಿದ್ಯಾರ್ಥಿಗಳು ಅವರ ಸೂಚನೆಯನ್ನು ನಿರ್ಲಕ್ಷಿಸಿ ಪರೀಕ್ಷೆಗೆ ಹಾಜರಾಗಿದ್ದರೆ ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿ ಉಪಪ್ರಾಂಶುಪಾಲರು ಹೇಳಿದಂತೆ ಮೂಡುಬಿದಿರೆಯಲ್ಲಿ ಕೆಲಸಕ್ಕೆ ಸೇರಿದ್ದರು. ವಿದ್ಯಾರ್ಥಿಗಳು ನಿರಂತರವಾಗಿ ಪರೀಕ್ಷೆಗೆ ಹಾಜರಾಗದೆ ಇದ್ದುದ್ದರಿಂದ ಸಂಶಯಗೊಂಡು ಮನೆಯವರು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಬಗ್ಗೆ ಮಾಹಿತಿ ಪಡೆದ ಮನೆಮಂದಿ ಹಾಗೂ ಸ್ಥಳೀಯರು ಪರೀಕ್ಷೆಗೆ ಗೈರು ಹಾಜರಾದ ವಿದ್ಯಾರ್ಥಿಯೊಬ್ಬನ ಮೂಲಕ ಉಪಪ್ರಾಂಶುಪಾಲರಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದಾಗ ಸತ್ಯಾಂಶ ಬಯಲಿಗೆ ಬಂದಿದೆ. ಅವರೆಲ್ಲ ಉಪಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡರು. ಪ್ರಕರಣದ ಕುರಿತು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಅವರನ್ನು ಮಾಧ್ಯಮ ಪ್ರತಿನಿಧಿಗಳು ವಿಚಾರಿಸಿದಾಗ, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ವಿಚಾರಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು