ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸುಬ್ರಹ್ಮಣ್ಯ: ಬೆಳ್ಳಿ ತಟ್ಟೆ ಕಳವು ಆರೋಪಿ ಸೆರೆ

Mainashree
Updated On : 4 Apr 2014, 10:32 am

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ದೇವರಿಗೆ ನೈವೇಧ್ಯ ಅರ್ಪಿಸುವ ಬೆಳ್ಳಿ ತಟ್ಟೆಯನ್ನು ಕದ್ದ ಅರೋಪಿಯನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದಾರೆ. ಈತನಿಂದ ಸುಮಾರು ರು. 65 ಸಾವಿರ ಮೌಲ್ಯದ 4 ಬೆಳ್ಳಿ ತಟ್ಟೆಯನ್ನು ವಶಪಡಿಸಿಕೊಳ್ಳಲಾಗಿದೆ.
 ದಾವಣಗೆರೆಯ ಶ್ರೀನಿವಾಸ ರಾವ್ ಎಂಬವರ ಪುತ್ರ ರವಿ ಕುಮಾರ್ ಎಸ್. (50) ಮಂಗಳವಾರ ಹೊಸಳಿಗಮ್ಮ ಗುಡಿಯ ತಟ್ಟೆಯಿಂದ ಹಣ ಕದಿಯಲು ಯತ್ನಿಸಿದಾಗ ದೇವಳದ ಸಿಬ್ಬಂದಿಯ ಕಣ್ಣಿಗೆ ಬಿದ್ದು, ಸಿಕ್ಕಿ ಬಿದ್ದ. ಬಳಿಕ ಈತನನ್ನು ಸುಬ್ರಹ್ಮಣ್ಯ ಪೊಲೀಸರಿಗೆ ಒಪ್ಪಿಸಲಾಗಿತ್ತು.
 ಪೊಲೀಸರು ಆತನ ಬಾಯಿಬಿಡಿಸಿದಾಗ ಈ ಹಿಂದೆ ಕದ್ದ 4 ಬೆಳ್ಳಿ ತಟ್ಟೆಗಳನ್ನು ಕದ್ದು ಮಾರಟ ಮಾಡಿರುವುದಾಗಿ ತಿಳಿಸಿದ್ದಾನೆ. ನಂತರ ಪೊಲೀಸರು ಅರೋಪಿಯನ್ನು ಸೊತ್ತುಗಳನ್ನು ಮಾರಾಟ ಮಾಡಿದ ದಾವಣಗೆರೆಗೆ ಕರೆದೊಯ್ದು ವಿಚಾರಣೆಗೊಳಪಡಿಸಿದಾಗ ಅಲ್ಲಿನ ಅಟೋ ಚಾಲಕ ಸುರೇಶ ಎಂಬಾತನಿಗೆ ಒಂದು ಬೆಳ್ಳಿ ತಟ್ಟೆಯನ್ನು ರು. 8 ಸಾವಿರಕ್ಕೆ ಮತ್ತು ಈ ಹಿಂದೆ 3 ಬೆಳ್ಳಿ ತಟ್ಟೆಯನ್ನು ರು. 12 ಸಾವಿರಕ್ಕೆ ಮಾರಿರುವುದು ಬೆಳಕಿಗೆ ಬಂತು. ಅದರಂತೆ ಮಾರಾಟ ಮಾಡಿದ ಮಾಲುಗಳನ್ನು ವಶಕ್ಕೆ ಪಡಕೊಂಡಿದ್ದಾರೆ.
ಕಲಿಕೆ ಬಿಟ್ಟು ಕಳ್ಳನಾದ: ದಾವಣಗೆರೆಯ ಕಾವೇರಿ ಶಾಲಾ ಬಳಿಯ ಶ್ರೀನಿವಾಸ ರಾಯರ ಪುತ್ರನಾದ ರವಿಕುಮಾರ್ ಎಂಜಿನಿಯರಿಂಗ್ ಪದವೀಧರ. ಈತ ಮಣಿಪಾಲದಲ್ಲಿ ಎಂಜಿನಿಯರಿಂಗ್ ಕಲಿಯುತ್ತಿರುವಾಗ ಶಿಕ್ಷಣವನ್ನು ಅರ್ಧದಲ್ಲೆ ಮೊಟಕುಗೊಳಿಸಿ ಹೊಟೇಲ್‌ಗಳಲ್ಲಿ ಕೆಲಸ ಮಾಡುತ್ತಿದ್ದ. ಬಳಿಕ ದಾವಣಗೆರೆಯ ಬಿಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಿದ್ದ, ಈತ ಅಲ್ಲೂ ಅರ್ಧದಲ್ಲೇ ಶಿಕ್ಷಣ ನಿಲ್ಲಿಸಿ, ಹೊಟೇಲ್ ಮತ್ತು ಕೆಟರಿಂಗ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸುಬ್ರಹ್ಮಣ್ಯ ಮನೆ ದೇವರು: ಈತನಿಗೆ ಸುಬ್ರಹ್ಮಣ್ಯ ದೇವರು ಮನೆದೇವರಾಗಿದ್ದು ಕಳೆದ ಸುಮಾರು 12 ವರ್ಷಗಳಿಂದ ಸುಬ್ರಹ್ಮಣ್ಯಕ್ಕೆ ಬರುತ್ತಿದ್ದ. ಈತ ವರ್ಷಕ್ಕೆ 2 ಭಾರಿ ಬಂದು ಹೋಗುತ್ತಿದ್ದ ಎನ್ನಲಾಗಿದೆ. 2013 ಅಗಸ್ಟ್ 28ರಂದು ಸುಬ್ರಹ್ಮಣ್ಯಕ್ಕೆ ಬಂದ ಈತ ದೇವಳದ ಒಳಾಂಗಣದಲ್ಲಿರಿಸಿದ ಬೆಳ್ಳಿ ತಟ್ಟೆಯನ್ನು ನೋಡಿದ್ದಾನೆ. ಸುತ್ತ- ಮುತ್ತ ಇರುವ ಜನರ ಕಣ್ತಪ್ಪಿಸಿ ತನ್ನ ಹೆಗಲ ಮೇಲಿದ್ದ ಶಾಲನ್ನು ತಟ್ಟೆಗೆ ಹೊದಿಸಿ ಅಲ್ಲಿಂದ ಸೊತ್ತನ್ನು ಎಗರಿಸಿ ದೇವಳದ ಪಶ್ಚಿಮ ಬಾಗಿಲಿನಿಂದ ಪರಾರಿಯಾಗಿದ್ದ. ಬಳಿಕ ದಾವಣಗೆರೆಗೆ ತೆರಳಿ ಅದನ್ನು ಅಲ್ಲಿ ಮಾರಿದ್ದನು. ಮತ್ತೆ ಸುಬ್ರಹ್ಮಣ್ಯಕ್ಕೆ ಬಂದ ಈತ ಮಂಗಳವಾರ ತಟ್ಟೆಯಿಂದ ರು. 5 ಕದಿಯಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಪೊಲೀಸರ ವಿಚಾರಣೆ ಸಂದರ್ಭ ಈ ಹಿಂದೆ ಕದ್ದ ವಿಚಾರ ಬಹಿರಂಗ ಪಡಿಸಿದ್ದಾನೆ. ಸುಬ್ರಹ್ಮಣ್ಯ ದೇವಳದವರು ಒಂದು ಬೆಳ್ಳಿ ತಟ್ಟೆ ಕಳವಾಗಿರುವುದಾಗಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ 2013 ಜೂನ್ ತಿಂಗಳಲ್ಲಿ ದೇವಳದಿಂದ 3 ಬೆಳ್ಳಿ ತಟ್ಟೆ ಕದ್ದಿರುವುದಾಗಿ ಕಳ್ಳತನ ಮಾಡಿದ ಆರೋಪಿ ರವಿ ಪೊಲೀಸರ ಮುಂದೆ ಬಾಯಿಬಿಟ್ಟಿದ್ದು, ಇದೀಗ 1 ಕೆ.ಜಿ. 569ಗ್ರಾಂ.ನ ಬೆಲೆಬಾಳುವ ಪುರಾತನ ಕಾಲದ ನಾಲ್ಕು ಬೆಳ್ಳಿ ತಟ್ಟೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
 ಆರೋಪಿಯನ್ನು ನ್ಯಾಯಾಲಕ್ಕೆ ಹಾಜರು ಪಡಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement