ನಮ್ಮದು ಸಹೋದರತ್ವ ರಾಜಕಾರಣ: ರಾಹುಲ್
ಮಂಗಳೂರು: ನಾವು ಭಾರತೀಯರು ಪರಸ್ಪರ ಹೊಡೆದಾಡುವಂತೆ ಮಾಡುವುದಿಲ್ಲ. ಪ್ರೀತಿ, ಸಹೋದರತ್ವ ರಾಜಕಾರಣ ಮಾಡುತ್ತೇವೆ. ಪ್ರತಿಪಕ್ಷದವರದ್ದು ದ್ವೇಷದ ರಾಜಕಾರಣ. ಅವರು ದೇಶದಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತರ ನಡುವೆ ರಾಜ್ಯ, ರಾಜ್ಯಗಳ ನಡುವೆ ಹೊಡೆದಾಟ ಮಾಡಿಸುತ್ತಾರೆ. ಮಹಿಳೆಯರ ಮೇಲೆ ಹಲ್ಲೆ ಮಾಡುತ್ತಾರೆ ಎಂದು ಎಂದು ರಾಷ್ಟ್ರೀಯ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ಮಂಗಳೂರು ನೆಹರೂ ಮೈದಾನದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರಸಭೆಯಲ್ಲಿ ಮಾತನಾಡಿದ ಅವರು, ದ್ವೇಷ ರಾಜಕಾರಣ ಮಾಡುವವರನ್ನು ನಾವು ಸೋಲಿಸುತ್ತೇವೆ. ಭಾರತದಿಂದ ಕಾಂಗ್ರೆಸ್ ಹೊಡೆದೋಡಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ವಿಚಾರ ಧಾರೆ, ಚಿಂತನೆಯನ್ನು ಹೊಡೆದೋಡಿಸುತ್ತೇನೆ ಹೇಳುವವರು ನಾಶವಾಗಿ ಹೋಗಿದ್ದಾರೆ ಎಂದು ರಾಹುಲ್ ಗುಡುಗಿದರು.
ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿಗಿಂತ 3 ಪಟ್ಟು ಹೆಚ್ಚು ರಸ್ತೆ ನಿರ್ಮಾಣ ಮಾಡಿದ್ದೇವೆ. ವಿಶ್ವ ವಿದ್ಯಾಲಯ ನಿರ್ಮಾಣ ಮಾಡಿದ್ದೇವೆ. ಪ್ರತಿಪಕ್ಷಗಳ ಪ್ರಗತಿ ಎಂದರೆ ಇಂಡಿಯಾ ಶೈನಿಂಗ್ ಹೆಸರಲ್ಲಿ ಆಯ್ದ ಶ್ರೀಮಂತರ ಪ್ರಗತಿ. ಅವರು ಆದಿವಾಸಿ, ದೀನ ದಲಿತರ ಅಭಿವೃದ್ಧಿ ಮಾಡಿಲ್ಲ. ನಾವು ಉದ್ಯೋಗ ಖಾತ್ರಿ ನೀಡಿದೆವು. ಬಡವರ ಕೈಗೆ ಕೂಲಿ ನೀಡಿದೆವು. ಊಟಕ್ಕೆ ಆಹಾರ ಭದ್ರತೆ ಕೊಟ್ಟೆವು. ಆಡಳಿತ ಪರಿಶೀಲನೆಗೆ ಆರ್ಟಿಐ ನೀಡಿದೆವು. ಇನ್ನು ಎಲ್ಲರಿಗೂ ಆರೋಗ್ಯ ಭದ್ರತೆ ನೀಡುತ್ತೇವೆ ಎಂದು ಭರವಸೆ ನೀಡಿದರು.
ಬಿಜೆಪಿ ಸರ್ಕಾರ ಇದ್ದಲ್ಲಿ ಆರ್ಟಿಐ ಇಲ್ಲ, ಲೋಕಾಯುಕ್ತ ಇಲ್ಲ. ಲೋಕಪಾಲ ಜಾರಿಗೆ ತರಲು ಹೋದಾಗ ಪ್ರತಿಪಕ್ಷಗಳೇ ತಡೆಯಲು ನೋಡಿದವು ಎಂದು ಟೀಕಿಸಿದರು.
ಪಂಚಾಯ್ತಿಗಳಲ್ಲಿ ಶೇ.50 ಮೀಸಲು ನೀಡಿದ್ದೇವೆ. ಇನ್ನು ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಶೇ.35 ಮಹಿಳೆಯರಿಗೆ ಮೀಸಲು ನೀಡುವಾಗ ವಿಪಕ್ಷಗಳೇ ತಡೆದವು. ಯುಪಿಎ 3 ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಶೇ.35 ಮೀಸಲು ನೀಡುತ್ತೇವೆ.
ಕಾಂಗ್ರೆಸ್ ಹೆಚ್ಚಿನ ಜನರಿಗೆ ಶಕ್ತಿ ಅಧಿಕಾರ ನೀಡುವ ಸಿದ್ಧಾಂತ. ಆದರೆ ಬಿಜೆಪಿ ಒಬ್ಬನೇ ವ್ಯಕ್ತಿ ಭಾರತ ಆಡಳಿತ ನಡೆಸುವ ಸಿದ್ಧಾಂತಕ್ಕೆ ಜೋತು ಬಿದ್ದಿದೆ. ಇಡೀ ಭಾರತಕ್ಕೆ ಒಬ್ಬನೇ ಚೌಕಿದಾರ್ನನ್ನು ಮಾಡಿ ಭಾರತವನ್ನು ಮರೆಯುವ ಹವಣಿಕೆಯಲ್ಲಿದ್ದಾರೆ. ಹಿಂದೂಸ್ತಾನದಲ್ಲಿ ಕೋಟಿಗಟ್ಟಲೆ ಚೌಕಿದಾರ್ಗಳು ಇದ್ದಾರೆ. ಅವರಿಗೆ ಶಕ್ತಿ ನೀಡಿದರೆ ಅವರೇ ರಕ್ಷಣೆ ಮಾಡುತ್ತಾರೆ ಎಂದರು.
ಉದ್ಯೋಗ ಕಾರಿಡಾರ್...
ದಿಲ್ಲಿಯಿಂದ ಮುಂಬಯಿ, ಚೆನ್ನೈಯಿಂದ ಬೆಂಗಳೂರು, ದಿಲ್ಲಿಯಿಂದ ಕೊಲ್ಕತ್ತವರೆಗೆ ಕೈಗಾರಿಕೆ ಕಾರಿಡಾರ್ ಮಾಡಿದ್ದೇವೆ. ರೇಲ್ವೇ ಕಾರಿಡಾರ್ ಮಾಡಿದ್ದೇವೆ. ಈ ಕಾರಿಡಾರ್ನಲ್ಲಿ ಬೇರೆ ಬೆರೆ ರೀತಿಯ ಉದ್ಯೋಗ ನೀಡುತ್ತೇವೆ. ರಾಜ್ಯಕ್ಕೂ ಅವಕಾಶ ಸಿಗಲಿದೆ.
ಮೊದಲ ಜನರ ಪ್ರಣಾಳಿಕೆ
ಮೊದಲ ಬಾರಿಗೆ ಎಲ್ಲರ ಅಭಿಪ್ರಾಯ ಪಡೆದು ಚುನಾವಣೆ ಪ್ರಣಾಳಿಕೆ ರಚಿಸಿದ್ದೇವೆ. ಹಿಂದೆಲ್ಲ ಮುಚ್ಚಿದ ಕೋಣೆ ಒಳಗೆ ಪ್ರಣಾಳಿಕೆ ರಚಿಸಲಾಗುತ್ತಿತ್ತು. ಈ ಬಾರಿ 5 ಲಕ್ಷ ಜನರ ಅಭಿಪ್ರಾಯ ಪಡೆದು ಪ್ರಣಾಳಿಕೆ ರಚಿಸಿದೆವು. ಇದರಲ್ಲಿ ಎಲ್ಲರ ಉದ್ಧಾರ ಇದೆ. ಯಾರನ್ನೂ ಹಿಂದುಳಿಯಲು ಬಿಡುವುದಿಲ್ಲ ಎಂದು ರಾಹುಲ್ ಗಾಂಧಿ ತಿಳಿಸಿದರು.