ಎತ್ತಿನಹೊಳೆ ಯೋಜನೆ ವಿರುದ್ಧ ಬಿಜೆಪಿಯಿಂದ ಟೋಲ್ ಫ್ರೀ ಕರೆ
ಜಿತೇಂದ್ರ ಕುಂದೇಶ್ವರ
ಮಂಗಳೂರು: ಎತ್ತಿನಹೊಳೆ ಯೋಜನೆ, ನೇತ್ರಾವತಿ ನದಿ ತಿರುವು ವಿರೋಧಿಸಿ ಪರಿಸರ ಪ್ರೇಮಿ ಸಂಘಟನೆಗಳು 'ನೋಟಾ ಮತ ಚಲಾಯಿಸಿ' ಅಭಿಯಾನ ನಡೆಸುತ್ತಿದ್ದರೆ ಇದಕ್ಕೆ ಸೆಡ್ಡು ಹೊಡೆಯಲು ಬಿಜೆಪಿ ಎತ್ತಿನಹೊಳೆ ಯೋಜನೆ ವಿರೋಧಿ ನಿಲುವಿನ ಪ್ರಚಾರಕ್ಕೆ ಟೋಲ್ ಫ್ರೀ ಕರೆ ಅಭಿಯಾನ ಆರಂಭಿಸಿದೆ.
ಚಿಕ್ಕಬಳ್ಳಾಪುರ ಸಂಸದ, ಕಾಂಗ್ರೆಸ್ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ ಮುತುವರ್ಜಿಯಲ್ಲಿ ಎತ್ತಿನಹೊಳೆ ಯೋಜನೆಗೆ ಲಾಭ ದೃಷ್ಟಿಕೋನದ ಶಂಕುಸ್ಥಾಪನೆ ನೆರವೇರಿದಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ದೊಡ್ಡ ಹೊಡೆತವನ್ನೇ ನೀಡಿತ್ತು. ಎತ್ತಿನಹೊಳೆ ಯೋಜನೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರೇ ಅದರಲ್ಲಿಯೂ ಜನಾರ್ದನ ಪೂಜಾರಿ ಬೆಂಬಲಿಗರೇ ಮುಂದೆ ನಿಂತ್ ಯಶಸ್ವಿ ಬಂದ್ ಮಾಡಿಸಿ, ವಿರೋಧಿ ಅಲೆ ಪೂಜಾರಿ ಮೇಲೆ ಬಾರದಂತೆ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಿದರು.
ಆದರೆ ಈ ಬಗ್ಗೆ ಬಿಜೆಪಿ ಹೆಚ್ಚಿನ ಗಮನ ಹರಿಸಿರಲಿಲ್ಲ. ಇದೀಗ ಕಲಾವಿದ ದಿನೇಶ್ ಹೊಳ್ಳ ನೇತೃತ್ವದಲ್ಲಿ ಪರಿಸರ ಪ್ರೇಮಿ ಸಂಘಟನೆಗಳು ರಾಜಕೀಯ ಪಕ್ಷಗಳ ಸ್ವಾರ್ಥ ಬುದ್ಧಿ ವಿರುದ್ಧ ನೋಟಾ ಮತ ಚಲಾಯಿಸುವಂತೆ ಅಭಿಯಾನ ನಡೆಸುತ್ತಿವೆ.
ಎಲ್ಲ ಪಕ್ಷಗಳು ಎತ್ತಿನಹೊಳೆ ಯೋಜನೆಗೆ ಚಿಕ್ಕಬಳ್ಳಾಪುರದಲ್ಲಿ ಒಂದು ನಿಲುವು, ದಕ್ಷಿಣ ಕನ್ನಡದಲ್ಲಿ ಭಿನ್ನ ನಿಲುವು ತೋರ್ಪಡಿಸುತ್ತಿದ್ದಾರೆ. ಆದ್ದರಿಂದ ರಾಜಕಾರಣಿಗಳಿಗೆ ಪಾಠ ಕಲಿಸಲು ನೋಟಾ ಚಲಾಯಿಸುವಂತೆ ಅಭಿಯಾನ ನಡೆಸುತ್ತಿದ್ದಾರೆ.
ದಿನದಿಂದ ದಿನಕ್ಕೆ ನೋಟಾ ಜನಪ್ರಿಯತೆಯತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಕೂಡಾ ಎತ್ತಿನಹೊಳೆ ಬಗ್ಗೆ ತಮ್ಮ ಸ್ಪಷ್ಟ ವಿರೋಧಿ ನಿಲುವನ್ನು ಜನರಿಗೆ ಹೇಳಲು ಟೋಲ್ ಫ್ರೀ ಉಚಿತ ಕರೆ ಅಭಿಯಾನ ನಡೆಸುತ್ತಿದೆ.
ಏನಿದು ಅಭಿಯಾನ?: ಸಾರ್ವಜನಿಕರಿಗೆ ಟೋಲ್ ಫ್ರೀ ಸಂಖ್ಯೆ ನೀಡಿ ಮಿಸ್ಡ್ ಕಾಲ್ ಕೊಟ್ಟರೆ ಸಾಕು. ಅವರೆ ಕರೆ ಮಾಡಿ ಎತ್ತಿನಹೊಳೆ ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ಕುರಿತು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯದ ಧ್ವನಿಮುದ್ರಿತ ಸಂದೇಶ ನೀಡುತ್ತಾರೆ.
ಈ ಅಭಿಯಾನದ ಮೂಲಕ ನೇತ್ರಾವತಿ ತಿರುವು ವಿರೋಧಿ ಹೋರಾಟಗಾರರ ಮನ ಒಲಿಸಿಕೊಳ್ಳುವ ಪ್ರಯತ್ನದಲ್ಲಿ ಬಿಜೆಪಿ ತೊಡಗಿದೆ. ತಮಗೆ ಮತ ಚಲಾಯಿಸಿದರೆ ನೇತ್ರಾವತಿ ನದಿ ತಿರುವು ಯೋಜನೆ ಜಾರಿ ಮಾಡಲು ಬಿಡುವುದಿಲ್ಲ ಎಂಬ ಸಂದೇಶದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
ಇದೇ ರೀತಿ ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ವಿರುದ್ಧವೂ ಅಭಿಪ್ರಾಯವನ್ನು ಸಂದೇಶದಲ್ಲಿ ಸಂಸದರು ಹೇಳಿದ್ದಾರೆ.
'ಎತ್ತಿನಹೊಳೆ ಅಥವಾ ನೇತ್ರಾವತಿ ನದಿ ತಿರುವು ಯೋಜನೆಯನ್ನು ಎಂದೆಂದಿಗೂ ಮಾಡಲು ಬಿಡುವುದಿಲ್ಲ, ಇಲ್ಲಿನ ಜನರಿಗೆ ಸರಿಯಾಗಿ ಕುಡಿಯುವ ನೀರು, ಕೃಷಿಗೆ ನೀರಿಲ್ಲ. ಇನ್ನು ನದಿ ನೀರು ತಿರುಗಿಸಿದರೆ ಇಲ್ಲಿನ ಜನರಿಗೆ ಸಮಸ್ಯೆ ಆಗುತ್ತದೆ. ಎಷ್ಟು ಮಾತ್ರಕ್ಕೂ ಯೋಜನೆ ಜಾರಿಗೆ ಬಿಡುವುದಿಲ್ಲ' ಎಂದು ಧ್ವನಿ ಮುದ್ರಿತ ಸಂದೇಶದಲ್ಲಿ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.
ಧ್ವನಿ ಮುದ್ರಿತ ಸಂದೇಶ...
ಎತ್ತಿನಹೊಳೆ ಅಥವಾ ನೇತ್ರಾವತಿ ನದಿ ತಿರುವು ಯೋಜನೆಯನ್ನು ಎಂದೆಂದಿಗೂ ಮಾಡಲು ಬಿಡುವುದಿಲ್ಲ, ಇಲ್ಲಿನ ಜನರಿಗೆ ಸರಿಯಾಗಿ ಕುಡಿಯುವ ನೀರು, ಕೃಷಿಗೆ ನೀರಿಲ್ಲ. ಇನ್ನು ನದಿ ನೀರು ತಿರುಗಿಸಿದರೆ ಇಲ್ಲಿನ ಜನರಿಗೆ ಸಮಸ್ಯೆ ಆಗುತ್ತದೆ. ಎಷ್ಟು ಮಾತ್ರಕ್ಕೂ ಯೋಜನೆ ಜಾರಿಗೆ ಬಿಡುವುದಿಲ್ಲ.
ನಳಿನ್ ಕುಮಾರ್ ಕಟೀಲು, ಬಿಜೆಪಿ ಅಭ್ಯರ್ಥಿ, ದ.ಕ. ಲೋಕಸಭಾ ಕ್ಷೇತ್ರ