ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನಕ್ಸಲ್ ಚಿತ್ರಕತೆಗೆ ರಕ್ಷಿತ್ ಶೆಟ್ಟಿ ಹೀರೋ

Rashmi Kasaragodu
Updated On : 7 Apr 2014, 1:22 am

ಉಡುಪಿ: ಕನ್ನಡ ಸಿನೆಮಾ ರಂಗದಲ್ಲಿ ಗಟ್ಟಿ ನೆಲೆ ಕಾಣುತ್ತಿರುವ ಉಡುಪಿಯ ಹೀರೋ ರಕ್ಷಿತ್ ಶೆಟ್ಟಿ ಮತ್ತೊಮ್ಮೆ ಕರಾವಳಿಯ ಕತೆಯನ್ನು ಸಿನೆಮಾ ಮಾಡುವುದಕ್ಕೆ ಹೊರಟಿದ್ದಾರೆ.
ಉಡುಪಿಯ ತುಳು, ಕುಂದಾಪುರದ ಕುಂದಕನ್ನಡ ಭಾಷೆಗಳನ್ನು ಸೇರಿಸಿ ಚಿತ್ರೀಕರಿಸಲಾಗಿರುವ 'ಉಳಿದವರು ಕಂಡಂತೆ' ಸಿನೆಮಾಕ್ಕೆ ರಾಜ್ಯದಾದ್ಯಂತ ಮೊದಲ ವಾರಕ್ಕಿಂತಲೂ 2ನೇ ವಾರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಖುಷಿಯಲ್ಲಿರುವ ರಕ್ಷಿತ್ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕರಾವಳಿಯ ನಕ್ಸಲ್ ಸಮಸ್ಯೆಯ ಹಿನ್ನೆಲೆಯಲ್ಲಿ 'ರಿಕ್ಕಿ' ಎನ್ನುವ ಸಿನೆಮಾ ಜೂನ್ 15ರ ನಂತರ ಉಡುಪಿ - ಕಾರ್ಕಳ - ಬೆಂಗಳೂರಿನಲ್ಲಿ ಚಿತ್ರೀಕರಣಗೊಳ್ಳಲಿದೆ. ಈ ಸಿನೆಮಾದ ಮೂಲಕ ತನ್ನೆಲ್ಲಾ ಸಿನೆಮಾಗಳಲ್ಲಿ ನೆಗೆಟಿವ್ ಪಾತ್ರ ಮಾಡುತ್ತಿದ್ದ ಗೆಳೆಯ ಋಷಭ್ ಶೆಟ್ಟಿ ನಿರ್ದೇಶಕರಾಗುತ್ತಿದ್ದಾರೆ ಎಂದರು.
ಈ ಸಿನೆಮಾಕ್ಕೆ ಮೊದಲು ಯೋಗರಾಜ್ ಭಟ್ಟರ ಹಾಸ್ಯದ ಮೂಲಕ ವಾಸ್ತು ಶಾಸ್ತ್ರದ ವಾಸ್ತವತೆಯನ್ನು ಬಿಚ್ಚಿಡುವ 'ವಾಸ್ತು ಪ್ರಕಾರ' ಎನ್ನುವ ಸಿನೆಮಾದಲ್ಲಿ ನಟಿಸಲಿದ್ದೇನೆ. ಈ ತಿಂಗಳ ಏಪ್ರಿಲ್- ಮೇ ತಿಂಗಳಲ್ಲಿ ಈ ಸಿನೆಮಾ ಪೂರ್ಣಗೊಳ್ಳಲಿದೆ ಎಂದರು. ಮುಂದಿನ ಜನವರಿ ತಿಂಗಳಲ್ಲಿ ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಒಂದು ಸಿನೆಮಾವನ್ನು ತಾನೇ ನಿರ್ದೇಶಿಸಲಿದ್ದೇನೆ ಎಂದು ತಿಳಿಸಿದರು.
'ಉಳಿದವರು ಕಂಡಂತೆ' ಸಿನೆಮಾದಲ್ಲಿ ಕುಂದಾಪುರ ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳ ಜನರಿಗೆ ಅರ್ಥ ಆಗಿಲ್ಲಾ ಎನ್ನುವ ದೂರಿದೆ. ಇದೊಂದು ಪ್ರಯೋಗ ಅಷ್ಟೇ, ಹಿಂದೆ ಮೈಸೂರು ಕನ್ನಡ, ಹುಬ್ಬಳ್ಳಿ ಕನ್ನಡ, ಮಂಡ್ಯ ಕನ್ನಡಗಳಲ್ಲಿ ಸಿನೆಮಾ ಬಂದಿವೆ. ನಾವು ನಮ್ಮೂರಿನ ಕತೆಗೆ ನೆಟಿವಿಟಿ ಇರಲಿ ಅಂತ ಕುಂದಾಪುರ ಕನ್ನಡವನ್ನು ಬಳಸಿದ್ದೇವೆ. ಇಂಟರ್‌ನೆಟ್, ಬ್ಲಾಗ್, ಫೇಸ್‌ಬುಕ್‌ನಲ್ಲಿ ಈ ಸಿನೆಮಾದ ಬಗ್ಗೆ ಚರ್ಚೆ ಆಗ್ತಿದೆ ಎಂದರೆ ಸಿನೆಮಾ ಯಶಸ್ವಿಯಾಗಿದೆ ಎಂದು ನಾವು ಭಾವಿಸುತ್ತೇವೆ. 3ನೇ ವಾರದಲ್ಲಿ ನಾವು ಚಿತ್ರಕ್ಕೆ ಹಾಕಿರುವ ರು. 3 ಕೋಟಿ ಹಿಂದಕ್ಕೆ ಬರ್ತದೆ. ನಂತರ ಬಂದದ್ದು ಲಾಭ ಎಂದು ರಕ್ಷಿತ್ ಖುಷಿ ಹಂಚಿಕೊಂಡರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement