ಪೂಜಾರಿ ವರ್ಸಸ್ ಕೇಸರಿ ಪಂಚೆ!
ಮಂಗಳೂರು: ಬಂಟ್ವಾಳ ಅಬ್ಬೆಟ್ಟು ಎಂಬಲ್ಲಿ ಭಾನುವಾರ ಬೆಳಗ್ಗೆ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಭಾಷಣ ಮಾಡುತ್ತಿದ್ದ ವೇಳೆ ಕೇಸರಿ ಪಂಚೆ ಧರಿಸಿಕೊಂಡು ಬಂದ ಯುವಕರ ಗುಂಪು ತರಾಟೆಗೆ ತೆಗೆದುಕೊಂಡಿದೆ.
ಪೂಜಾರಿ ಭಾಷಣ ಮಾಡುತ್ತಿದ್ದ ವೇಳೆ ಆರ್ಎಸ್ಎಸ್ ಕಾರ್ಯಕರ್ತ ಎಂದು ಹೇಳಿಕೊಂಡ ಯುವಕನೊಬ್ಬ, ಸೌಜನ್ಯ ಪ್ರಕರಣ ಎಲ್ಲಿವರೆಗೆ ಬಂತು? ಎಂದು ಪ್ರಶ್ನಿಸಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೂಜಾರಿ ಉತ್ತರಿಸಿದ್ದಾರೆ. ಹುಚ್ಚನನ್ನು ಬಂಧಿಸಿ ಸುಳ್ಳು ಹೇಳುತ್ತಿದ್ದೀರಿ, ಪ್ರಧಾನ ಆರೋಪಿಯ ಮೇಲೆ ಕೇಸ್ ಏಕೆ ಹಾಕುತ್ತಿಲ್ಲ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಗ ಪೂಜಾರಿ, ಆರೋಪಿ ಅವನಲ್ಲ ಬೇರೆಯವನು ಎಂದು ನಿನಗೆ ಗೊತ್ತಿದ್ದರೆ ನಿನಗೆ ಕೊಲೆ ಮಾಡಿದವರು ಯಾರು ಎನ್ನುವುದು ಗೊತ್ತು ಎಂದರ್ಥ. ನಿನ್ನ ಮೇಲೆಯೇ ಕೇಸ್ ಹಾಕಿ ಜೈಲಿಗೆ ಹಾಕಬೇಕಾ ಎಂದು ಗದರಿದರು.
ಕೇಸರಿ ಪಂಚೆ ಹಾಕಿದ್ದೀಯ? ಕೇಸರಿ ಬಣ್ಣಕ್ಕೆ ಪಾವಿತ್ರ್ಯ ಇದೆ. ಅದನ್ನು ತೊಟ್ಟು ಅವಮರ್ಯಾದೆ ಮಾಡಬೇಡಿ ಎಂದರು. ಊರಲ್ಲಿ ಕೇಸರಿ ಪಂಚೆ, ಶಾಲು ನಿತ್ಯ ಹಾಕಿಕೊಳ್ಳುತ್ತೇವೆ ಎಂದು ಯುವಕರು ವಾದಿಸಿದರು.
ಇದೇ ಸಂದರ್ಭ ವೇದಿಕೆಯಲ್ಲಿ ಮೊಬೈಲ್ನಲ್ಲಿ ಮಾತನಾಡಿದ ರೊಂದ ಪೂಜಾರ್ತಿ ಎಂಬವರಿಗೂ ಪೂಜಾರಿ ಎಲ್ಲರ ಎದುರೇ ಕಿವಿ ಮಾತು ಹೇಳಿದರು.
ಸಭೆಯಿಂದ ಎದ್ದು ಹೊರ ನಡೆದ ಪೂಜಾರಿ ಕಾಂಗ್ರೆಸ್ ಸಭೆಗಳಲ್ಲಿ ಆರ್ಎಸ್ಎಸ್ ಕಾರ್ಯಕರ್ತರನ್ನು ಕರೆಯಬೇಡಿ ಎಂದು ತಾಕೀತು ಮಾಡಿದರು.
ಈ ಸಂದರ್ಭ ಮುಖಂಡ ಹರಿಕೃಷ್ಣ ಬಂಟ್ವಾಳ್, ಆರೋಗ್ಯ ಸಚಿವ ಯು.ಟಿ.ಖಾದರ್ ಇದ್ದರು.