ಭಾರತ ಗೆಲ್ಲಲು ಬಿಜೆಪಿ ಸೋಲಬೇಕು: ರೈ
ಬಂಟ್ವಾಳ: ಹಸಿದವರಿಗೆ ಅನ್ನ, ಬಡವರ ಮನೆಗೆ ಬೆಳಕು, ದುಡಿಯುವ ಕೈಗಳಿಗೆ ಬಲ ಕೊಟ್ಟದ್ದು ಕೇಂದ್ರದ ಯುಪಿಎ ಸರ್ಕಾರದ ಹೆಗ್ಗಳಿಕೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ಭಾನುವಾರ ಅನಂತಾಡಿ ನಾರಾಯಣ ಸಾಲ್ಯಾನ್‌ರ ಮನೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ರಥಯಾತ್ರೆ, ಇಟ್ಟಿಗೆ ಯಾತ್ರೆ, ರಾಮ ಮಂದಿರ ಕಟ್ಟುತ್ತೇವೆ, ಭಾರತ ಪ್ರಕಾಶಿಸುತ್ತಿದೆ ಎಂದೆಲ್ಲಾ ಶೀರ್ಷಿಕೆ ಬಳಸಿ ಮತದಾರರನ್ನು ವಂಚಿಸುವ ಬಿಜೆಪಿ ಈ ಬಾರಿ ಭಾರತ ಗೆಲ್ಲಿಸಿ ಎಂಬರ್ಥದಲ್ಲಿ ಪ್ರಚಾರ ನಡೆಸುತ್ತಿದೆ. ಭಾರತ ಗೆಲ್ಲಬೇಕೆಂದಿದ್ದರೆ ಬಿಜೆಪಿ ಸೋಲಬೇಕಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ, ಕಳೆದ ನಾಲ್ಕು ಲೋಕಸಭಾ ಚುನಾವಣೆಯಲ್ಲಿ ಜನಾರ್ದನ ಪೂಜಾರಿ ಸೋಲಿಗೆ ಬಿಜೆಪಿ ಷಡ್ಯಂತ್ರವೇ ಕಾರಣ ಎಂದು ಆರೋಪಿಸಿದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಆಲಿ, ಪ್ರಮುಖರಾದ ಸದಾಶಿವ ಬಂಗೇರ, ನಾರಾಯಣ ಸಾಲ್ಯಾನ್, ನರೇಂದ್ರ ರೈ, ಪ್ರಶಾಂತ್, ಸತೀಶ್ ಇದ್ದರು.