ಶಾರ್ಟ್ ಸರ್ಕ್ಯೂಟ್; 3200 ಕೋಳಿ ಮರಿ ಬೆಂಕಿಗಾಹುತಿ
ವಿಟ್ಲ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಕೋಳಿ ಸಾಕಾಣಿಕ ಕೇಂದ್ರ ಸಂಪೂರ್ಣ ಭಸ್ಮವಾಗಿ ಸುಮಾರು 3200 ಕೋಳಿಮರಿಗಳು, ಆಹಾರ ಪದಾರ್ಥ ಹಾಗೂ ವಿವಿಧ ಉಪಕರಣಗಳು ಸುಟ್ಟು ಕರಕಲಾಗಿರುವ ಘಟನೆ ಕೊಳ್ನಾಡು ಗ್ರಾಮದ ಪಾದೆಕರಿ ಎಂಬಲ್ಲಿ ಭಾನುವಾರ ಮುಂಜಾನೆ ಸಂಭವಿಸಿದೆ.
ಅಜಿತ್ ಕುಮಾರ್ ಎಂಬವರಿಗೆ ಸೇರಿದ ಕೋಳಿ ಫಾರಂನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ 3200 ಕೋಳಿ ಮರಿಗಳು, ಅವುಗಳಿಗೆ ಸೇರಿದ ಆಹಾರ ಪದಾರ್ಥಗಳು ಮತ್ತು ಇನ್ನಿತರ ಸಲಕರಣೆಗಳು ನಾಶವಾಗಿ ಸುಮಾರು ರು. 7 ಲಕ್ಷ ನಷ್ಟವಾಗಿವೆ. ಭಾನುವಾರ ಮುಂಜಾನೆ 4.30ರ ಸುಮಾರಿಗೆ ಘಟನೆ ನಡೆದಿದೆ.
ಫಾರಂನಿಂದ ಸ್ವಲ್ಪ ದೂರದಲ್ಲೇ ಅಜಿತ್ ಅವರ ಮನೆಯಿದ್ದು, ಅವರು ಎದ್ದು ನೋಡಿದಾಗ ಬೆಂಕಿ ಹೊತ್ತಿಕೊಂಡು ಉರಿಯುತ್ತಿದ್ದುದು ಕಂಡುಬಂದಿದೆ.
ಕೂಡಲೇ ನೆರೆಮನೆಯವರೆಲ್ಲ ಸೇರಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ ಬೆಂಕಿ ಎಲ್ಲೆಡೆ ವ್ಯಾಪಿಸಿದ್ದರಿಂದ ಫಾರಂ ಸಂಪೂರ್ಣ ಭಸ್ಮವಾಗಿದೆ.