ಪ್ರತಾಪ್ ಸಿಂಹ ರೋಡ್ ಶೋ ಇಂದು
ಗೋಣಿಕೊಪ್ಪಲು: ವಿರಾಜಪೇಟೆ ತಾಲೂಕಿನ ವಿವಿಧೆಡೆ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಶುಕ್ರವಾರ ಮತಯಾಚನೆ ಹಾಗೂ ರೋಡ್ ಶೋ ನಡೆಸಲಿದ್ದಾರೆ.
ತಾಂತ್ರಿಕ ಕಾರಣದಿಂದ ರದ್ದುಗೊಂಡಿದ್ದ ನರೇಂದ್ರ ಮೋದಿ ಭಾಷಣದ ನೇರಪ್ರಸಾರ ಕಾರ್ಯಕ್ರಮ 3ಡಿ ಎಫೆಕ್ಟ್ ಇರುವ ಶೋ ಇಂದು ರಾತ್ರಿ 7 ಗಂಟೆಗೆ ಗೋಣಿಕೊಪ್ಪಲು- ಅರುವತ್ತೊಕ್ಕಲು ರಸ್ತೆಯಲ್ಲಿರುವ ಒಕ್ಕಲಿಗರ ಗಿರೀಶ್ ಅವರ ನಿವೇಶನದಲ್ಲಿ ನೆರವೇರಲಿದೆ. ಇದಕ್ಕೂ ಮುನ್ನ ಗೋಣಿಕೊಪ್ಪಲು ನಗರದಲ್ಲಿ ರೋಡ್ ಶೋ ನಡೆಸಿ ಪ್ರತಾಪ್ ಸಿಂಹ ಮೋದಿ ಭಾಷಣ ವೀಕ್ಷಿಸಲಿದ್ದಾರೆ.
ವಿರಾಜಪೇಟೆ ಸಮೀಪ ಚೆಂಬೆಬೆಳ್ಳೂರುವಿನಲ್ಲಿ ಮಧ್ಯಾಹ್ನ 2 ಗಂಟೆಗೆ ಪ್ರತಾಪ್ ಸಿಂಹ ಪ್ರಚಾರ ಭಾಷಣ ಮಾಡಲಿದ್ದು, ಕಾಕೋಟುಪರಂಬುವಿನಲ್ಲಿ 3 ಗಂಟೆಗೆ, ಕೆದಮುಳ್ಳೂರುವಿನಲ್ಲಿ 3.45ಕ್ಕೆ, ಬೇಟೋಳಿಯಲ್ಲಿ 4.30ಕ್ಕೆ ಹಾಗೂ ವೀರಾಜಪೇಟೆಗೆ ಸಂಜೆ 5 ಗಂಟೆಗೆ ಆಗಮಿಸಿ ರೋಡ್ ಶೋ ಹಾಗೂ ಕಾರು ನಿಲ್ದಾಣದಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೋದಿ ಭಾಷಣ ಪ್ರಸಾರ: ತಾಂತ್ರಿಕ ಅಡಚಣೆಯಿಂದ ಮುಂದೂಡಲ್ಪಟ್ಟಿದ್ದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಭಾಷಣದ ನೇರ ಪ್ರಸಾರ ಶುಕ್ರವಾರ ಪಟ್ಟಣದಲ್ಲಿ ಪ್ರಸಾರಗೊಳ್ಳಲಿದೆ ಎಂದು ಬಿಜೆಪಿ ಯುವಮೋರ್ಚ ತಾಲೂಕು ಅಧ್ಯಕ್ಷ ನೆಲ್ಲೀರ ಚಲನ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ, ಅವರು ಸಂಜೆ 6 ಗಂಟೆಗೆ ಗೋಣಿಕೊಪ್ಪಲಿನಲ್ಲಿ ನಿರ್ಮಿಸಿರುವ 40್ಢ 40 ಪರದೆಯಲ್ಲಿ 3ಡಿ ತಂತ್ರಜ್ಞಾನದಲ್ಲಿ ಪ್ರಸಾರಗೊಳ್ಳಲಿದೆ. ರಾಜ್ಯದ 5 ಸ್ಥಳಗಳಲ್ಲಿ ಏಕಕಾಲಕ್ಕೆ ನರೇಂದ್ರ ಮೋದಿ ಅವರ ಭಾಷಣವನ್ನು ಕಾರ್ಯಕರ್ತರು ಹಾಗೂ ಅಭಿಮಾನಿಗಳು ನೇರವಾಗಿ ವೀಕ್ಷಿಸಬಹುದಾಗಿದೆ ಎಂದರು.
ಮಾಜಿ ಶಾಸಕ ಎಚ್.ಡಿ. ಬಸವರಾಜು ಎಲ್ಲಿಯೂ ನೆಲೆ ಕಾಣದೆ ಬಿಜೆಪಿ ಬಗ್ಗೆ ಟೀಕೆಗಳನ್ನು ಮಾಡುತ್ತಿದ್ದಾರೆ. ಇದನ್ನು ಕೂಡಲೇ ನಿಲ್ಲಿಸದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದರು.
ಬಿಜೆಪಿ ತಾಲೂಕು ಕಾರ್ಯದರ್ಶಿ ಚೆಪ್ಪುಡೀರ ಕಿಶೋರ್ ಮಾತನಾಡಿ, ಇಲ್ಲಿ ನೆಲೆಸಿರುವ ಕೇರಳಿಗರು ಕೇರಳದಲ್ಲಿ ಮತದಾನ ಮಾಡಿ ಇಲ್ಲಿಯೂ ಮತದಾನ ಮಾಡುವ ಸಾಧ್ಯತೆ ಹೆಚ್ಚಿದೆ. ಇಂಥವರ ಬಗ್ಗೆ ನಮ್ಮಲ್ಲಿ ಮಾಹಿತಿ ಇದೆ. ಇದನ್ನು ಚುನಾವಣಾಧಿಕಾರಿಗಳು ತಡೆಗಟ್ಟಬೇಕು. ಇಲ್ಲದಿದ್ದಲ್ಲಿ ಪಕ್ಷ ಇಂಥ ಅಕ್ರಮದ ವಿರುದ್ಧ ಹೋರಾಡಲಿದೆ. ಇದು ಕಾನೂನು ಬಾಹಿರ ಎಂಬುದನ್ನು ಅರಿತು ಅಂಥ ಮತದಾರರಿಗೆ ಇಲ್ಲಿ ಮತ ಚಲಾಯಿಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಆರ್ಎಂಸಿ ಸದಸ್ಯ ಮನೆಯಪಂಡ ಅಣ್ಣಾದೊರೆ ದೇವಯ್ಯ ಇದ್ದರು.