ಕಾಂಗ್ರೆಸ್ನಿಂದ ಪೊಲೀಸ್ ಇಲಾಖೆ ದುರ್ಬಳಕೆ : ನಾಗರಾಜ ಶೆಟ್ಟಿ ಆರೋಪ
ಮಂಗಳೂರು: ಬಿಜೆಪಿ ಸಕ್ರಿಯ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಎಫ್ಐಆರ್ ಹಾಕುವ ಮೂಲಕ ಪೊಲೀಸ್ ಇಲಾಖೆಯನ್ನು ಕಾಂಗ್ರೆಸ್ ದುರ್ಬಳಕೆ ಮಾಡುತ್ತಿದೆ ಎಂದು ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ಆರೋಪಿಸಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಳ್ಳಾಲ, ಕಲ್ಲಡ್ಕ, ಸುರತ್ಕಲ್ನಲ್ಲಿ ನಡೆದ ಗಲಭೆಯಲ್ಲಿ ವಿನಾ ಕಾರಣ ಬಿಜೆಪಿ ಕಾರ್ಯಕರ್ತರನ್ನು ಸಿಲುಕಿಸುತ್ತಿದ್ದಾರೆ ಎಂದರು. ನಳಿನ್ ಕುಮಾರ್ ಕಟೀಲ್ ಸಂಸದರಾಗಿ ಜಿಲ್ಲೆಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಬಿಜೆಪಿ, ಆರ್ಎಸ್ಎಸ್ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿಲ್ಲ. ಬದಲಾಗಿ ಮಾಧ್ಯಮಗಳು ಸಮೀಕ್ಷೆ ನಡೆಸಿ ರ್ಯಾಂಕ್ ನೀಡಿವೆ. ಇದಕ್ಕೆ ನಮ್ಮ ಬಳಿ ಎಲ್ಲ ದಾಖಲೆಗಳಿವೆ. ಬೇಕಾದರೆ ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿಯವರಿಗೆ ತೋರಿಸಲಾಗುವುದು. ವೈಯಕ್ತಿಕ ನಿಂದನೆ ಮಾಡುವುದು ಬಿಟ್ಟು ದೇಶದ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸೋಣ ಎಂದರು.ಗೋಷ್ಠಿಯಲ್ಲಿ ಬಿಜೆಪಿ ಕಾರ್ಯಕರ್ತರಾದ ರಂಗನಾಥ ಕಿಣಿ, ಪ್ರವೀಣ್ ಬರ್ಕೆ ಇದ್ದರು.