ಅನಿಲ ಟ್ಯಾಂಕರ್ ಸೋರಿ ಹೆದ್ದಾರಿ ಬಂದ್
ಉಪ್ಪಿನಂಗಡಿ: ಶಿರಾಡಿ ಗ್ರಾಮದ ಅಡ್ಡಹೊಳೆಯ ರಾ.ಹೆ.75ರ ಕೊಲ್ಯೊಟ್ಟೆ ತಿರುವಿನಲ್ಲಿಅಡುಗೆ ಅನಿಲ ಸಾಗಾಟದ ಟ್ಯಾಂಕರ್ ಮಗುಚಿಬಿದ್ದು ಅನಿಲ ಸೋರಿಕೆಯುಂಟಾದ ಹಿನ್ನೆಲೆಯಲ್ಲಿ ಹೆದ್ದಾರಿ ಸಂಚಾರ ತಡೆಹಿಡಿದ ಘಟನೆ ಭಾನುವಾರ ನಡೆದಿದೆ.
ಮಂಗಳೂರಿನಿಂದ ಬೆಂಗಳೂರಿನತ್ತ ಗ್ಯಾಸ್ ಹೇರಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಕೊಲ್ಯೊಟ್ಟೆ ತಿರುವಿನಲ್ಲಿ ಬೆಳಗ್ಗೆ 9 ಗಂಟೆ ಸುಮಾರಿಗೆ ಚಾಲಕನ ನಿಯಂತ್ರಣ ಕಳೆದುಕೊಂಡು ಹೆದ್ದಾರಿ ಬದಿಗೆ ಮಗುಚಿ ಬಿತ್ತು. ಪರಿಣಾಮ ಟ್ಯಾಂಕರ್ನಲ್ಲಿದ್ದ ಚಾಲಕ ಪ್ರಭು ಮತ್ತು ಸಹ ಚಾಲಕ ರಘು ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಾಹನ ಸಂಚಾರ ಸ್ಥಗಿತ: ಅಪಘಾತಕ್ಕೀಡಾದ ಟ್ಯಾಂಕರ್ನಿಂದ ಅನಿಲ ಸೋರಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಸಂಭವನೀಯ ಅಪಾಯ ತಡೆಗಟ್ಟಲು ತಕ್ಷಣವೇ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತಡೆಹಿಡಿಯಲಾಯಿತು. ಪುತ್ತೂರು ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ಕರೆಸಿ, ಟ್ಯಾಂಕರ್ನಲ್ಲಿ ರೋಟರ್ಗೇಜ್ನಿಂದ ಸೋರಿಕೆಯಾಗುತ್ತಿದ್ದ ಅನಿಲವನ್ನು ತಡೆಗಟ್ಟಲು ಲಭ್ಯ ಸಂಪನ್ಮೂಲಗಳನ್ನು ಬಳಸಿ ತುರ್ತು ಕ್ರಮ ಕೈಗೊಂಡರೂ ಅನಿಲ ಸೋರಿಕೆ ನಿಯಂತ್ರಣಕ್ಕೆ ಬರಲಿಲ್ಲ.
ಗ್ಯಾಸ್ ಟ್ಯಾಂಕರ್ ಅಪಘಾತಕ್ಕೀಡಾದಾಗ ಅದರ ರೋಟರ್ಗೇಜ್ಗೆ ಹಾನಿಯಾಗಿದ್ದು, ಮಂಗಳೂರಿನ ಎಂಆರ್ಪಿಎಲ್ ಸಂಸ್ಥೆಯ ಪರಿಣತ ತಜ್ಞರ ಆಗಮನದ ನಂತರವೇ ಸರಿ ಪಡಿಸಬೇಕಾಗಿದ್ದು, ಮಧ್ಯಾಹ್ನದವರೆಗೆ ಅವರನ್ನು ಕಾಯಬೇಕಾಯಿತು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಆಗಮಿಸಿದ ತಜ್ಞರ ತಂಡ ಅನಿಲ ಸೋರಿಕೆಯನ್ನು ನಿಯಂತ್ರಿಸಲು ಮುಂದಾಗಿದ್ದು, 12.30ರ ಬಳಿಕ ಬದಲಿ ಟ್ಯಾಂಕರ್ಗೆ ಅನಿಲ ವರ್ಗಾವಣೆ ಕಾರ್ಯ ಪ್ರಾರಂಭಿಸಲಾಯಿತು. ಪೂರ್ಣ ಪ್ರಮಾಣದ ಅನಿಲ ವರ್ಗಾವಣೆ ಕಾರ್ಯ ನಡೆಯುವವರೆಗೂ ದಿನವಿಡಿ ಹೆದ್ದಾರಿ ಸಂಚಾರ ವ್ಯತ್ಯಯಗೊಂಡಿತು. ವಾಹನ ಸಂಚಾರವನ್ನು ಇಚ್ಲಂಪಾಡಿ ಮಾರ್ಗವಾಗಿ ಬದಲಿ ರಸ್ತೆಯಲ್ಲಿ ಮುಂದುವರಿಯಲು ಅವಕಾಶ ಕಲ್ಪಿಸಲಾಯಿತು.
ಪೊಲೀಸರ ಕೊರತೆ: ಚುನಾವಣೆ ಪ್ರಚಾರಕ್ಕಾಗಿ ಭಾನುವಾರ ದ.ಕ. ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುವುದರಿಂದ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಸೀಮಿತ ಸಂಖ್ಯೆಯ ಸಿಬ್ಬಂದಿಯಷ್ಟೇ ಠಾಣೆಗಳಲ್ಲಿ ಲಭ್ಯರಿದ್ದ ಕಾರಣ ಅಡ್ಡೋಳೆಯಲ್ಲಿ ಅನಿಲ ಟ್ಯಾಂಕ್ ಅಪಘಾತ ಸಂಭವಿಸಿದಾಗ ಹೆದ್ದಾರಿಯಲ್ಲಿನ ವಾಹನಗಳ ಸಂಚಾರ ನಿಯಂತ್ರಣ ಮಾಡಲು ಸಿಬ್ಬಂದಿ ಕೊರತೆ ಪೊಲೀಸ್ ಇಲಾಖೆಯನ್ನು ಕಾಡಿತ್ತು.
ಪುತ್ತೂರು ಟ್ರಾಫಿಕ್ ಪೊಲೀಸರನ್ನು ಚುನಾವಣಾ ಬಂದೋಬಸ್ತ್ನಿಂದ ತೆರವುಗೊಳಿಸಿ ಟ್ಯಾಂಕರ್ ಅಪಘಾತ ಸ್ಥಳಕ್ಕೆ ನಿಯೋಜಿಸಲಾಯಿತು.
ಕಾರ್ಯಪಡೆ ನಿಯೋಜನೆ ಯಾವಾಗ?
ರಾ.ಹೆ. 75ರ ಪೆರ್ನೆಯಲ್ಲಿ 2013ರ ಏ.9ರಂದು ಅನಿಲ ಸಾಗಾಟದ ಟ್ಯಾಂಕ್ ಪಲ್ಟಿಯಾಗಿ ಅಗ್ನಿ ಸ್ಪರ್ಶಗೊಂಡು ಭಾರಿ ಅನಾಹುತ ಸಂಭವಿಸಿತ್ತು.
ನಂತರವೂ ಸಂಚಾರಿ ಅಗ್ನಿಶಾಮಕ ದಳದ ರಚನೆ, ಅಪಘಾತ ನಡೆದಾಕ್ಷಣ ಅನಿಲ ಸೋರಿಕೆ ತಡೆಗಟ್ಟಲು ಕಾರ್ಯಪಡೆ ನಿಯೋಜನೆಯಾಗದೆ ಭರವಸೆಯಾಗಿಯೇ ಉಳಿದಿದೆ.
ಭಾನುವಾರ ನಡೆದ ದುರಂತದ ವೇಳೆ ಅದೃಷ್ಟವಶಾತ್ ಸೋರಿಕೆಯಾದ ಅನಿಲಕ್ಕೆ ಅಗ್ನಿ ಸ್ಪರ್ಶವಾಗಲಿಲ್ಲ. ಒಂದು ವೇಳೆ ಪರಿಸ್ಥಿತಿ ನಿಯಂತ್ರಣಕ್ಕೆ ಸಿಗದ ಸ್ಥಿತಿ ಉದ್ಭವಿಸಿದ್ದರೆ, ಘಟನೆ ಸಂಭವಿಸಿ ಮೂರು ಗಂಟೆ ಬಳಿಕ ಸ್ಥಳ ತಲುಪಲು ಸಾಧ್ಯವಾಗುವ ಅಧಿಕಾರಿ ತಂಡಗಳಿಗೆ ನಷ್ಟದ ಅಂದಾಜು ಮಾಡುವ ಕಾರ್ಯ ಮಾತ್ರವೇ ಬಾಕಿ ಉಳಿಯುತ್ತಿತ್ತು. ರಾ.ಹೆ. 75ರಲ್ಲಿ ಬಹಳಷ್ಟು ತಿರುವುಗಳಿದ್ದು, ಪದೇ ಪದೇ ಬೃಹತ್ ಗಾತ್ರದ ಅನಿಲ ಟ್ಯಾಂಕರ್ಗಳು ಅಪಘಾತಕ್ಕೀಡಾಗುವ ಉಪ್ಪಿನಂಗಡಿ- ಶಿರಾಡಿ ಪ್ರದೇಶಗಳಲ್ಲಿ ಸಂಭವನೀಯ ಅಪಾಯವನ್ನು ನಿಯಂತ್ರಿಸಲು ಸಂಚಾರಿ ಅಗ್ನಿಶಾಮಕ ದಳ ಮತ್ತು ಅನಿಲ ಸೋರಿಕೆ ತಡೆಗಟ್ಟುವ ವ್ಯವಸ್ಥೆಯನ್ನು ಇನ್ನಾದರೂ ಅನುಷ್ಠಾನಗೊಳಿಸಲು ಜಿಲ್ಲಾಡಳಿತ ಮುಂದಾಗಬೇಕಿದೆ.