ಬದಲಿ ಅಲ್ಲ ಪರ್ಯಾಯ ಶಕ್ತಿ ಆಪ್: ಯೋಗೇಂದ್ರ ಯಾದವ್
ಮಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿಯಿಂದ ದೇಶದ ಪ್ರಗತಿ ಸಾಧ್ಯವಿಲ್ಲ. ದೇಶದಲ್ಲಿ ಬದಲಿ ರಾಜಕೀಯ ಶಕ್ತಿ ಬೇಡ, ಪರ್ಯಾಯ ರಾಜಕೀಯ ಶಕ್ತಿ ಬೇಕು. ಪರ್ಯಾಯ ರಾಜಕೀಯ ಶಕ್ತಿಯಾಗಿ ಆಮ್ ಆದ್ಮಿ ರೂಪುಗೊಂಡಿದ್ದು, ವ್ಯವಸ್ಥಿತವಾಗಿ ಬದಲಾವಣೆ ತರಲಿದೆ ಎಂದು ಆಪ್ ಮುಖಂಡ ಯೋಗೇಂದ್ರ ಯಾದವ್ ಹೇಳಿದ್ದಾರೆ.
ನೈಸರ್ಗಿಕ ಸೌಂದರ್ಯದ ಜತೆ ವೈವಿಧ್ಯತೆಗಳು ಬೇಕು. ಯುಪಿಎ 10 ವರ್ಷ ಆಡಳಿತದಲ್ಲಿ ಭ್ರಷ್ಟಾಚಾರದಲ್ಲಿ ದಾಖಲೆ ನಿರ್ಮಿಸಿದೆ. ಹಣಕಾಸು ಪ್ರಗತಿ ಮತ್ತು ಜನರ ಪ್ರಗತಿ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾಂಗ್ರೆಸ್‌ನ ಜಾತ್ಯತೀತತೆ ಮುಖವಾಡ ಕಳಚಿಬಿದ್ದಿದೆ. ಅವರು ಮತಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ, ರಾಹುಲ್ ಗಾಂಧಿ ನಂಬಿಕೆ ಕಳೆದುಕೊಂಡಿದ್ದಾರೆ. ಬಿಜೆಪಿ ಭ್ರಷ್ಟಾಚಾರದಲ್ಲಿ ಕಾಂಗ್ರೆಸ್‌ಗಿಂತ ಹೊರತಾಗಿಲ್ಲ. ರಾಜ್ಯದಲ್ಲಿ ಬಿ.ಶ್ರೀರಾಮುಲು ಮತ್ತು ಬಿ.ಎಸ್.ಯಡಿಯೂರಪ್ಪ ಅವರನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳುವ ಮೂಲಕ ಸಾಬೀತು ಪಡಿಸಿದೆ. ಗುಜರಾತ್ ಮಾದರಿಯಲ್ಲಿ ಯಾವುದೇ ಹುರುಳಿಲ್ಲ. ಗುಜರಾತ್ ಅಭಿವೃದ್ಧಿ ಆಗಿದೆ ಎನ್ನುತ್ತಾರೆ ಆದರೆ ಆರೋಗ್ಯ ಮತ್ತು ಶಿಕ್ಷಣದಲ್ಲಿ ತೀರಾ ಹಿಂದುಳಿದಿದೆ. ಅಲ್ಲಿ ಆಯ್ದ ಕೆಲವೇ ಕಡೆಗಳಲ್ಲಿ ಅಭಿವೃದ್ಧಿಯಾಗಿದೆ ಎಂದರು.
ಎಲ್ಲ ಸಮುದಾಯ, ಜಾತಿ ಮತ್ತು ಧರ್ಮದವರಿಗೆ ಅವರದ್ದೇ ಆದ ಹಕ್ಕುಗಳಿವೆ ಇದನ್ನು ಆಪ್ ನಂಬುತ್ತದೆ.ಎಲ್ಲರಿಗೂ ಸಮಾನ ಹಕ್ಕು ಸಿಗಬೇಕು ಅದರಲ್ಲಿಯೂ ಮುಖ್ಯವಾಹಿನಿಯಿಂದ ಹೊರಗಿರುವ ಅಲ್ಪಸಂಖ್ಯಾತರಿಗೆ ಹಕ್ಕು ಸಿಗಬೇಕು ಎಂದರು.
ಭ್ರಷ್ಟಾಚಾರ ವಿರುದ್ಧ ದೊಡ್ಡ ಆಂದೋಲನದಿಂದ ಆಮ್ ಆದ್ಮಿ ಪಕ್ಷ ರೂಪುಗೊಂಡಿದೆ. ಆಂದೋಲನ ಕೆಳಮಟ್ಟದಿಂದ ಆರಂಭವಾಗಬೇಕು. ಗ್ರಾಮ ಪಂಚಾಯ್ತಿ ಮಟ್ಟದಿಂದ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಆಪ್ ಯತ್ನಿಸುತ್ತಿದೆ. ದೇಶದಲ್ಲಿ 400 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ರಾಜಕೀಯದಲ್ಲಿ ಮಹತ್ತರ ಪಾತ್ರ ವಹಿಸಲಿದ್ದೇವೆ ಎಂದರು.
ನರೇಂದ್ರ ಮೋದಿಯನ್ನು ವಾರಣಾಸಿಯಲ್ಲಿ ಸೋಲಿಸಲು ಆಪ್ ಕಾರ್ಯಕರ್ತರು ಎಲ್ಲ ಶ್ರಮ ವ್ಯಯಿಸುತ್ತಿದ್ದಾರೆ. ಇದು ಸಾಂಕೇತಿಕ ಸ್ಪರ್ಧೆ ಅಲ್ಲ, ಗಂಭೀರವಾಗಿ ಸ್ಪರ್ಧೆ ಮಾಡುತ್ತಿದ್ದೇವೆ. ಹಳ್ಳಿ, ಹಳ್ಳಿಗೆ, ಮೊಹಲ್ಲಾಗಳಿಗೆ ಕಾರ್ಯಕರ್ತರು ಹೋಗುತ್ತಿದ್ದಾರೆ ಎಂದರು.
ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರ ಅಭ್ಯರ್ಥಿ ಎಂ.ಆರ್.ವಾಸುದೇವ ಇದ್ದರು.