ಅಕ್ರಮ ಚಿನ್ನ ಸಾಗಣೆ; ಒಬ್ಬನ ಸೆರೆ
ಮಂಗಳೂರು: ದುಬೈಯಿಂದ ಮಂಗಳೂರಿಗೆ ವಿಮಾನದಲ್ಲಿ ಸರಕು ಪೆಟ್ಟಿಗೆಯಲ್ಲಿ ಚಿನ್ನದ ಪಟ್ಟಿ ಕಳ್ಳ ಸಾಗಣೆ ಮಾಡುತ್ತಿದ್ದ ಒಬ್ಬನನ್ನು ಬಂಧಿಸಿರುವ ಕಸ್ಟಮ್ಸ್ ಅಧಿಕಾರಿಗಳು 8 ಲಕ್ಷ ಮೌಲ್ಯದ 72.900 ಗ್ರಾಂ ಚಿನ್ನವನ್ನು ಕಸ್ಟಮ್ಸ್ ವಶಕ್ಕೆ ತೆಗೆದುಕೊಂಡಿದ್ದಾರೆ. ಕಾಸರಗೋಡಿನ ತೆಕ್ಕಿಲ್ ನಿವಾಸಿ ಮೊಹಮ್ಮದ್ ಜಬೀರ್ ಬೈಕಾರ (23) ಎಂಬಾತನನ್ನು ಬಂಧಿತ ಆರೋಪಿಯಾಗಿದ್ದು ವಿಚಾರಣೆ ಮುಂದುವರಿದಿದೆ.
ಹಟ್ಟಿಗೆ ಬೆಂಕಿ: ನಕ್ಸಲ್ ಕೃತ್ಯ- ವದಂತಿ
ಬೆಳ್ತಂಗಡಿ: ಕುತ್ಲೂರು ಗ್ರಾಮದ ಕಿರಿಯಾಡಿ ಸನಿಹದ ಮಣಿಲ ಎಂಬಲ್ಲಿ ಮನೆಯೊಂದರ ಹಟ್ಟಿ ಸುಟ್ಟು ಹೋಗಿದ್ದು ಇದನ್ನು ನಕ್ಸಲರು ಮಾಡಿದ್ದಾರೆ ಎಂದು ವದಂತಿ ಹಬ್ಬಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಲ್ಲಿನ ಜಿನ್ನಪ್ಪ ಯಾನೆ ಜಿನ್ನು ಮಲೆಕುಡಿಯ ಎಂಬವರಿಗೆ ಸೇರಿದ ದನದ ಕೊಟ್ಟಿಗೆಗೆ ಭಾನುವಾರ ಮಧ್ಯರಾತ್ರಿ ಬೆಂಕಿ ತಗುಲಿತ್ತು. ಆದರೆ, ಈ ಸಂದರ್ಭ ಹಟ್ಟಿಯೊಳಗಿದ್ದ ಹಸುಗಳನ್ನು ಬಿಡಲಾಗಿತ್ತು. ಈ ಕೃತ್ಯದ ಹಿಂದೆ ನಕ್ಸಲರು ಇದ್ದಾರೆ ಎಂಬ ಸುದ್ದಿ ಹರಡಿದೆ. ಹೀಗಾಗಿ ನಕ್ಸಲ್ ನಿಗ್ರಹ ದಳ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶರಣಪ್ಪ ಭೇಟಿ ನೀಡಿದ್ದಾರೆ. ಘಟನೆ ನಡೆದ ಸ್ಥಳವು ಪಶ್ಚಿಮ ಘಟ್ಟದಲ್ಲಿದ್ದು, ಬಹಳಷ್ಟು ಕಡಿದಾದ ಎತ್ತರ ಪ್ರದೇಶದಲ್ಲಿದೆ. ಘಟನಾ ಸ್ಥಳದಲ್ಲಿ ಯಾವುದೇ ಕರಪತ್ರಗಳಾಗಲಿ, ಸುಳಿವುಗಳಾಗಲಿ ಲಭ್ಯವಾಗಿಲ್ಲ. ಹಟ್ಟಿಗೆ ಬೆಂಕಿ ತಗುಲಿದ ಕ್ಷಣದಲ್ಲಿ ಮನೆಯವರಿಗೆ ಎಚ್ಚರಾಗಿದ್ದು, ಹೊರಗೆ ನೋಡಿದಾಗ ಯಾರೂ ಕಂಡು ಬರಲಿಲ್ಲ. ಹೀಗಾಗಿ ಇದು ನಕ್ಸಲರ ಕೃತ್ಯವಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ದಾಳಿ ನಡೆಸಲು ನಕ್ಸಲಿಯರು ಬಂದದ್ದಾಗಿದ್ದರೆ ಮನೆಯವರು ಹೊರಗೆ ಬಂದಾಗ ಪರಾರಿಯಾಗುವ ಸಾಧ್ಯತೆಗಳು ಕಡಿಮೆ ಮತ್ತು ಅವರು ಬಂದಿದ್ದರೆ ಕರಪತ್ರಗಳನ್ನು ಬಿಟ್ಟು ಹೋಗುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಘಟನೆ ಬಗ್ಗೆ ವೇಣೂರು ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸ್ ತನಿಖೆಯಿಂದ ವಾಸ್ತವ ವಿಚಾರಗಳು ಬೆಳಕಿಗೆ ಬರಬೇಕಿದೆ.
ವಿವಾಹ ಹಿಂದಿನ ದಿನ ಮಹಿಳೆ ಆತ್ಮಹತ್ಯೆ
ವಿಟ್ಲ: ವಿವಾಹದ ಹಿಂದಿನ ದಿನ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಕುಳ ಗ್ರಾಮದಲ್ಲಿ ಸೋಮವಾರ ನಡೆದಿದೆ. ಕುಳ ಗ್ರಾಮದ ಪಿಲಿಪೆ ನಿವಾಸಿ ಅಣ್ಣುಪೂಜಾರಿ ಅವರ ಪುತ್ರಿ ಇಂದಿರಾ(34) ಮೃತಪಟ್ಟ ಮಹಿಳೆ. ಈಕೆಗೆ ಏ.9ರಂದು ವಿವಾಹ ನಿಶ್ಚಯವಾಗಿತ್ತು. ಏ.8ರಂದು ಮೆಹೆಂದಿ ದಿನ ತನ್ನ ಮನೆಯಲ್ಲಿಯೇ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಮನೆಮಂದಿ ಆಕೆಯನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಗಡಿಗೆ ನುಗ್ಗಿದ ಲಾರಿ
ಮೂಲ್ಕಿ: ಮೂಲ್ಕಿಯಿಂದ ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಕಿನ್ನಿಗೋಳಿ ಪೇಟೆಯಲ್ಲಿ ಸುಖಾನಂದ ವೃತ್ತದ ಬಳಿ ಜೀಪ್ ಮತ್ತು ಕಾರಿಗೆ ಡಿಕ್ಕಿ ಹೊಡೆದು ರಸ್ತೆ ಬದಿಯ ಅಂಗಡಿಗೆ ನುಗ್ಗಿದ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ. ಅವಘಡದಲ್ಲಿ ಅಂಗಡಿಯ ಮುಂಭಾಗ ಸಂಪೂರ್ಣ ಹಾನಿಯಾಗಿದ್ದು, ಈ ಸಂದರ್ಭ ರಸ್ತೆ ಸಂಚಾರ ವ್ಯತ್ಯಯವಾಯಿತು. ಸ್ಥಳೀಯರು ಕೂಡಲೇ ಲಾರಿಯನ್ನು ತೆರವುಗೊಳಿಸಿ, ಸಂಚಾರ ಮುಕ್ತಗೊಳಿಸಿದರು.
ಹಲ್ಲೆ: ಇಬ್ಬರ ವಿರುದ್ಧ ಪ್ರಕರಣ
ಪುತ್ತೂರು: ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ವಿರುದ್ಧ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಜನತಾ ಕಾಲೋನಿಯ ದಿ. ಟಿ.ಸಿ. ಮೊಹಮ್ಮದ್ ಅವರ ಪುತ್ರ ಮೊಹಮ್ಮದ್ ಶಾಲೀದ್ (27) ಏ. 12ರಂದು ರಾತ್ರಿ ಮೊಟ್ಟೆತ್ತಡ್ಕದಲ್ಲಿ ಹೋಗುತ್ತಿದ್ದಾಗ ಖಲಂದರ ಶಾಫಿ ಮತ್ತು ಶಕೀಲ್ ಕೂರ್ನಡಲೆಂಬವರು ತಡೆದು ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ ಎಂದು ಮೊಹಮ್ಮದ್ ಶಾಲೀದ್ ನಗರ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ಮಹಮ್ಮದ್ ಶಾಲೀದ್ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.