ಮತದಾರರ ಗೆಲ್ಲಲು ಅಂತಿಮ ಕಸರತ್ತು
ಬಂಟ್ವಾಳ: ಬಹಿರಂಗ ಚುನಾವಣಾ ಪ್ರಚಾರಕ್ಕೆ ಮಂಗಳವಾರ ಮಂಗಳ ಹಾಡಬೇಕಿದ್ದು, ಲೋಕ ಸಮರಕ್ಕೆ ಸಿದ್ಧವಾಗಿರುವ ರಾಜಕೀಯ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ಮತದಾರರ ಮನ ಗೆಲ್ಲುವ ನಿಟ್ಟಿನಲ್ಲಿ ಅಂತಿಮ ಹಂತದ ಸರ್ಕಸ್ ನಡೆಸುತ್ತಿದ್ದಾರೆ.
ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಪ್ರಧಾನ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಚಾರದಲ್ಲಿ ಮುಂದಿದ್ದರೆ, ಜೆಡಿಎಸ್- ಎಸ್‌ಡಿಪಿಐ ಮೈತ್ರಿ ಅಭ್ಯರ್ಥಿ, ಸಿಪಿಐ ಅಭ್ಯರ್ಥಿ, ಆಮ್ ಆದ್ಮಿ ಅಭ್ಯರ್ಥಿ ಹಾಗೂ ಪಕ್ಷೇತರ ಅಭ್ಯರ್ಥಿಯೊಬ್ಬರು ತಾವೂ ಕಣದಲ್ಲಿದೇವೆ ಎಂದು ಮತದಾರರ ಮನಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷ ಹಾಗೂ ಬಿಜೆಪಿ ಈ ಬಾರಿ ಮನೆಮನೆ ಭೇಟಿ ಮೂಲಕ ಮತದಾರರನ್ನು ಬೇಟೆಯಾಡುತ್ತಿದೆ. ಈಗಾಗಲೇ ಮೂರು ಸುತ್ತಿನ ಪ್ರಚಾರ ಕಾರ್ಯ ಮುಗಿಸಿರುವ ಈ ಎರಡು ಪಕ್ಷಗಳು ಪ್ರಚಾರ ಕಾರ್ಯದಲ್ಲಿ ತಾವೇ ಮುಂದು ಎಂಬಂತೆ ಬಿರುಸಿನ ಓಟದಲ್ಲಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಪರವಾಗಿ ಇಲ್ಲಿನ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸೇರಿ ಸಭೆ, ಮನೆಮನೆ ಭೇಟಿ, ಪಾದಯಾತ್ರೆ, ಕರಪತ್ರ ಹಂಚಿಕೆ ಹಾಗೂ ಬೂತ್ ಮಟ್ಟದಲ್ಲಿ ಪಕ್ಷವನ್ನು, ಕಾರ್ಯಕರ್ತರನ್ನು ಸಂಘಟಿಸುವ ಮೂಲಕ ಪೂಜಾರಿ ಪರ ಪ್ರಚಾರ ನಡೆಸುತ್ತಿದೆ.
ಮನೆಮನೆ ಪ್ರಚಾರಕ್ಕೆ ಹೆಚ್ಚು ಒತ್ತು: ಎಲ್ಲ ಪಕ್ಷಗಳಿಗಿಂತ ಮೊದಲೇ ಮೋದಿ ಬ್ಯಾನರ್‌ನಲ್ಲಿ ಚುನಾವಣಾ ಪ್ರಚಾರಕ್ಕಿಳಿದ ಬಿಜೆಪಿ, ಕಾರ್ಯಕರ್ತರ ಮೂಲಕ ಮನೆಮನೆ ಭೇಟಿಗೆ ಹೆಚ್ಚು ಒತ್ತುಕೊಟ್ಟು ಪ್ರಚಾರ ಕಾರ್ಯ ನಡೆಸಿದೆ.
ಪಕ್ಷದ ನಾಯಕರೂ ಕೂಡ ಕಾರ್ಯಕರ್ತರ ಸಭೆ, ಪಾದಯಾತ್ರೆ, ಸಂಘ ಪರಿವಾರದ ಬೈಠಕ್ ಮೂಲಕ ಪ್ರಚಾರದ ಭರಾಟೆಯನ್ನು ಹೆಚ್ಚಿಸಿದೆ. ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಪರವಾಗಿ ಪ್ರಚಾರಕ್ಕಿಳಿದ ಬಿಜೆಪಿ ಮುಖಂಡರು ಕ್ಷೇತ್ರ ವ್ಯಾಪ್ತಿಯ ಎಲ್ಲ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಿದೆ.
ಮೈತ್ರಿಯಿಂದ ಕೆಲವರು ಅತೃಪ್ತಿ: ಜೆಡಿಎಸ್- ಎಸ್‌ಡಿಪಿಐ ಮೈತ್ರಿಕೂಟದ ಅಭ್ಯರ್ಥಿ ಹನೀಫ್ ಖಾನ್ ಪರವಾಗಿಯೂ ಇಲ್ಲಿನ ಕಾರ್ಯಕರ್ತರು ಪ್ರಚಾರದಲ್ಲಿದ್ದಾರೆ. ಒಂದೆರಡು ಬಹಿರಂಗ ಸಭೆ ನಡೆಸಿದ್ದಾರೆ. ಆದರೆ, ಇಲ್ಲಿನ ಜೆಡಿಎಸ್ ಕೆಲವು ಕಾರ್ಯಕರ್ತರು ಹಾಗೂ ಮುಖಂಡರು ಎಸ್‌ಡಿಪಿಐಯೊಂದಿಗೆ ಮೈತ್ರಿಯಿಂದ ಅತೃಪ್ತರಾಗಿ ಪ್ರಚಾರ ಕಾರ್ಯದಿಂದ ದೂರ ಉಳಿದಿರುವುದು ಕಂಡುಬಂದಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಕೃಷ್ಣಪ್ಪ ಪೂಜಾರಿ ಈ ಬಾರಿ ಬಿಜೆಪಿಗೆ ಹಾರಿದ್ದು, ಇದರಿಂದ ಜೆಡಿಎಸ್‌ಗೆ ಲಾಭ ಎನ್ನುತ್ತಾರೆ ಜೆಡಿಎಸ್ ಮುಖಂಡರು. ಆಪ್ ಅಭ್ಯರ್ಥಿ ವಾಸುದೇವ ರಾವ್, ಸಿಪಿಐ ಅಭ್ಯರ್ಥಿ ಯಾದವ ಶೆಟ್ಟಿ ಕೂಡ ಬಿ.ಸಿ. ರೋಡ್ ಪರಿಸರದಲ್ಲಿ ಒಂದು ಸುತ್ತು ಪ್ರಚಾರ ನಡೆಸಿದರೆ ಪಕ್ಷೇತರ ಅಭ್ಯರ್ಥಿ ಸೋಮಶೇಖರ್ ಬಿ.ಸಿ. ರೋಡಿನಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮ ಸ್ಪರ್ಧೆಯ ಬಗ್ಗೆ ಗಮನ ಸೆಳೆದಿದ್ದಾರೆ.
ಪ್ರಚಾರಕ್ಕೆ ತಾರಾಬಲ..: ಬಂಟ್ವಾಳ ಕ್ಷೇತ್ರಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಆಯಾಯ ಪಕ್ಷದ ಒಂದೆಡರು ಸ್ಟಾರ್ ಪ್ರಚಾರಕರು ಆಗಮಿಸಿ ಪ್ರಚಾರ ಕಾರ್ಯವನ್ನು ನಡೆಸಿದ್ದಾರೆ.
ಇದರಲ್ಲಿ ಪ್ರಮುಖವಾಗಿ ಬಿಜೆಪಿಯಿಂದ ನಟಿ ಮಾಳವಿಕಾ, ಮಾಜಿ ಸಂಸದೆ ತೇಜಸ್ವಿನಿ ಗೌಡ, ಕಾಂಗ್ರೆಸ್‌ನಿಂದ ನಟಿ ಭವ್ಯ ಆಗಮಿಸಿದ್ದರು. ಚುನಾವಣೆಗೆ ಅಧಿಸೂಚನೆ ಪ್ರಕಟಗೊಂಡ ಬಳಿಕ ವಿವಿಧ ಪಕ್ಷಗಳು ಸುದ್ದಿಗೋಷ್ಠಿ ನಡೆಸಿ ಆರೋಪ ಪ್ರತ್ಯಾರೋಪಗಳ ಸುರಿಮಳೆಗೈದಿದೆ. ಒಟ್ಟಿನಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಫೇಸ್‌ಬುಕ್, ವಾಟ್ಸ್ ಅಪ್‌ಗಳಂತಹ ಸಾಮಾಜಿಕ ತಾಣಗಳ ಜೊತೆಗೆ ಸರ್ವತಂತ್ರಗಳನ್ನು ಬಳಸಿರುವ ರಾಜಕೀಯ ಪಕ್ಷಗಳು ಮತದಾರರನ್ನು ಬಲೆಯೊಳಗೆ ಹಾಕುವ ಪ್ರಯತ್ನದಲ್ಲಿ ಮಗ್ನವಾಗಿವೆ.
-ಮೌನೇಶ ವಿಶ್ವಕರ್ಮ