ಚುನಾವಣೆ ಸುಧಾರಣೆಗೆ ಸಿಬ್ಬಂದಿಯಿಂದ ಅಭಿಪ್ರಾಯ ಸಂಗ್ರಹ
ಮಂಗಳೂರು: ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಚುನಾವಣೆ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯಿಂದ ಚುನಾವಣೆ ಸಿದ್ಧತೆ ಕುರಿತು ಜಿಲ್ಲಾಡಳಿತ ಈ ಬಾರಿ ಲಿಖಿತ ಅಭಿಪ್ರಾಯ ಪಡೆಯುತ್ತಿದೆ. ಚುನಾವಣೆ ಕರ್ತವ್ಯಕ್ಕೆ ನೀಡಿದ ತರಬೇತಿಯಿಂದ ತೊಡಗಿ ಡಿಮಸ್ಟರಿಂಗ್ ವರೆಗೆ ಹಾಗೂ ಚುನಾವಣೆ ವ್ಯವಸ್ಥೆ ಸಬಲೀಕರಣ ಬಗ್ಗೆ 15 ಅಂಶಗಳನ್ನು ಭರ್ತಿ ಮಾಡಿ ಪತ್ರಕವನ್ನು ಕೊಡಬೇಕು. ಮುಂದಿನ ಚುನಾವಣೆಯಲ್ಲಿ ಇನ್ನಷ್ಟು ಸುಧಾರಣೆ ತರುವ ದೃಷ್ಟಿಯಿಂದ ಜಿಲ್ಲೆಯಲ್ಲಿ ಈ ಕ್ರಮ ಅನುಸರಿಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎ.ಬಿ.ಇಬ್ರಾಹಿಂ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲೆಯ 1766 ಮತಗಟ್ಟೆ ಪೈಕಿ 29 ಮತಗಟ್ಟೆಗಳನ್ನು ಮಾದರಿ ಮತಗಟ್ಟೆ ಎಂದು ಗುರುತಿಸಲು ಉದ್ದೇಶಿಸಲಾಗಿದೆ. ಅಂದರೆ ಮತಗಟ್ಟೆಯನ್ನು ಸ್ವಚ್ಛವಾಗಿಟ್ಟು, ಮತದಾರರಿಗೆ ಮತದಾನಕ್ಕೆ ವಿಶೇಷ ಸೌಲಭ್ಯ ಕಲ್ಪಿಸುವುದು. ಮೂಡುಬಿದಿರೆ-3, ಮಂಗಳೂರು ಉತ್ತರ-5, ಮಂಗಳೂರು ದಕ್ಷಿಣ-2, ಮಂಗಳೂರು-2, ಬಂಟ್ವಾಳ-10, ಪುತ್ತೂರು-2, ಸುಳ್ಯ-3 ಮತಗಟ್ಟೆಯನ್ನು ಆಯ್ಕೆ ಮಾಡಲಾಗಿದೆ. ಬೆಳ್ತಂಗಡಿಯಲ್ಲಿ ಇಂಥ ಯಾವುದೇ ಮತಗಟ್ಟೆ ಇಲ್ಲ ಎಂದರು.